ಬೆಂಗಳೂರು: ಮುಸ್ಲಿಮರಿಗೆ ಕಾಂಗ್ರೆಸ್ ಸರ್ಕಾರ ಶೇ.4ರಷ್ಟು ಗುತ್ತಿಗೆ ಮೀಸಲಾತಿ ನೀಡಿರುವುದರ ವಿರುದ್ಧದ ಹೋರಾಟದಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ಹೊಂದಾಣಿಕೆ ಇಲ್ಲ, ಗೊಂದಲವಿದೆ ಎನ್ನುವುದು ಸತ್ಯಕ್ಕೆ ದೂರ. ಕೆಲ ಪತ್ರಿಕೆಗಳಲ್ಲಿ ವರದಿಯಾಗಿರುವ ಸುದ್ದಿಗಳು ಸತ್ಯಕ್ಕೆ ದೂರವಾದದ್ದು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರು ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ವಿಧಾನಸಭೆ ಅಧಿವೇಶನದಲ್ಲಿ ನಮ್ಮ ಶಾಸಕರು ಮತ್ತು ಬಿಜೆಪಿ ಶಾಸಕರುಗಳು ಒಟ್ಟಾಗಿ ಪ್ರತಿಭಟನೆ ನಡೆಸಿದರು. ಮತ್ತು ಗೌರವಾನ್ವಿತ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ನಿಯೋಗದ ಭಾಗವಾಗಿದ್ದರು ಎಂದು ತಿಳಿಸಿದರು.
ಸಂವಿಧಾನವು “ಧರ್ಮ ಆಧಾರಿತ” ಮೀಸಲಾತಿಗೆ ಅನುಮತಿಸುವುದಿಲ್ಲ ನ್ಯಾಯಾಲಯಗಳು ಸಹ ಇದನ್ನು ಪುನರುಚ್ಚರಿಸಿವೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಸ್ಪಷ್ಟ ಮಾತುಗಳಲ್ಲಿ ತಿಳಿಸಿದರು.
ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಕಾಂಗ್ರೆಸ್‌ನ ಶೇ.4% ಮೀಸಲಾತಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯ ಮತ್ತು ತತ್ವಗಳನ್ನು ಉಲ್ಲಂಘಿಸುತ್ತದೆ ಮತ್ತು ಜೈನರು ಹಾಗೂ ಕ್ರಿಶ್ಚಿಯನ್ನರಂತಹ ಇತರ ಅಲ್ಪಸಂಖ್ಯಾತರನ್ನು ಬಿಟ್ಟು ಸಂಪೂರ್ಣವಾಗಿ ಮತಬ್ಯಾಂಕ್ ರಾಜಕೀಯಕ್ಕಾಗಿ ಎಂಬುದು ಸ್ಪಷ್ಟವಾಗಿದೆ ಎಂದು ನಿಖಿಲ್ ಅವರು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ನ ತುಷ್ಟೀಕರಣ ರಾಜಕೀಯವನ್ನ ಖಂಡಿಸುತ್ತೇವೆ
ಜೆಡಿಎಸ್ ಪಕ್ಷವು, ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ರಾಜಕೀಯವನ್ನು ಬಲವಾಗಿ ಖಂಡಿಸುತ್ತದೆ. ನ್ಯಾಯಯುತ ನೀತಿಗಳ ಬದಲಿಗೆ, ಅವರು ಮತಗಳಿಗಾಗಿ ಒಂದು ಸಮುದಾಯವನ್ನು ಸಮಾಧಾನಪಡಿಸುತ್ತಾ, ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ. ಇದು ಭಾರತದ ಸಂವಿಧಾನಕ್ಕೆ ಸಂಪೂರ್ಣ ವಿರುದ್ಧವಾಗಿದೆ. ನಾವು ಎಲ್ಲರಿಗೂ ಸಮಾನ ಅವಕಾಶಗಳನ್ನು ಬಯಸುತ್ತೇವೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಸ್ಪಷ್ಟನೆ ನೀಡಿದರು.