ನವದೆಹಲಿ: ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿಯವರು (Basavaraja Bommai) ನವ ದೆಹಲಿಯಲ್ಲಿ ಸೋಮವಾರ ಸಂಜೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಉಚ್ಚಾಟನೆ ನಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಇನ್ನೂ ಈ ಕುರಿತು ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಣಯವನ್ನು ನಾವೆಲ್ಲರೂ ಪಾಲಿಸಬೇಕಾಗುತ್ತದೆ. ಬರುವಂತಹ ದಿನಗಳಲ್ಲಿ ಪಕ್ಷಕ್ಕೆ ಯಾವುದೇ ರೀತಿಯ ನಷ್ಟವಾಗದ ರೀತಿಯಲ್ಲಿ ನಾವು ನಡೆದುಕೊಳ್ಳಬೇಕಿದೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರ ವಿಷಯದ ಬಗ್ಗೆ ವರಿಷ್ಠರ ಜೊತೆ ಚರ್ಚಿಸಿ ಮಾತನಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಸಂಜೆ 6 ಗಂಟೆವರೆಗೂ ಸಂಸತ್ತಿನಲ್ಲಿ ಇದ್ದೆವು. ಅಲ್ಲಿಂದ ಹೊರಗೆ ಬಂದಾಗ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಉಚ್ಚಾಟನೆಯ ಸುದ್ದಿ ಕೇಳಿ ಬಂದಿತು.
ಬಿಜೆಪಿ ಒಂದು ರಾಷ್ಟ್ರೀಯ ಪಕ್ಷ ತನ್ನದೇ ಆದ ನೀತಿ ನಿರ್ಧಾರಗಳನ್ನು ಹಾಕಿಕೊಂಡಿರುವ ಪಕ್ಷ. ಕರ್ನಾಟಕದ ವಿಚಾರದಲ್ಲಿ ಕಳೆದ ಒಂದು ವರ್ಷದಿಂದ ಪಕ್ಷದ ಹೈಕಮಾಂಡ್ ಎಲ್ಲರನ್ನು ಕರೆದು ಮಾತನಾಡಿಸಿ ಒಗ್ಗೂಡಿಸುವ ಪ್ರಯತ್ನ ಮಾಡಿದೆ ಎಂದು ಹೇಳಿದರು.
ಈಗ ಶಿಸ್ತು ಮುಖ್ಯ ಎಂದು ಒಂದು ಕಾಲಘಟ್ಟಕ್ಕೆ ಬಂದಿರುವುದರಿಂದ ಕೆಲವರಿಗೆ ನೊಟೀಸ್ ಕೊಟ್ಟಿದ್ದಾರೆ. ಕೆಲವರ ಮೇಲೆ ಕ್ರಮ ಕೈಗೊಂಡಿದ್ದಾರೆ. ಈ ವಿಚಾರವಾಗಿ ಏನೆಲ್ಲ ಇದೆ ಎಂದು ವರಿಷ್ಠರನ್ನು ಭೇಟಿ ಮಾಡಿಲ್ಲ. ಆದಷ್ಟು ಎಲ್ಲರನ್ನು ಒಂದುಗೂಡಿಸಿ ಕರೆದುಕೊಂಡು ಹೋಗುವುದು ಇಂದಿನ ಅನಿವಾರ್ಯತೆ ಇದೆ. ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಣಯವನ್ನು ನಾವೆಲ್ಲರೂ ಪಾಲಿಸಬೇಕಾಗುತ್ತದೆ.
ಬರುವಂತಹ ದಿನಗಳಲ್ಲಿ ಪಕ್ಷಕ್ಕೆ ಯಾವುದೇ ರೀತಿಯ ನಷ್ಟವಾಗದ ರೀತಿಯಲ್ಲಿ ನಾವು ನಡೆದುಕೊಳ್ಳಬೇಕಿದೆ. ಶಾಸಕ ಬಸನಗೌಡ ಯತ್ನಾಳ ಅವರ ವಿಷಯದ ಬಗ್ಗೆ ವರಿಷ್ಠರ ಜೊತೆ ಚರ್ಚಿಸಿ ಮಾತನಾಡುತ್ತೇನೆ ಎಂದು ಹೇಳಿದರು.
ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರಿಗೆ ಎರಡು ಬಾರಿ ನೊಟೀಸ್ ಕೊಟ್ಟಿದ್ದರು. ಅವರು ಅದಕ್ಕೆ ಉತ್ತರ ಕೊಟ್ಟಿದ್ದರು. ಆದರೆ, ಅವರು ಏನು ಉತ್ತರ ಕೊಟ್ಟಿದ್ದರು ಎಂದು ಗೊತ್ತಿಲ್ಲ. ಯಾವ ಕಾರಣಕ್ಕಾಗಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಕೊಳ್ಳುತ್ತೇನೆ. ಇಂತಹ ಕಾಲದಲ್ಲಿ ಒಕ್ಕಟ್ಟಾಗಿ ಹೋಗುವ ಅವಶ್ಯಕತೆ ಇದೆ ಎಂದರು.
ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಭೇಟಿ ಮಾಡಿದ್ದೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ಯತ್ನಾಳ್ ಅವರು ಅವರ ಸಕ್ಕರೆ ಕಾರ್ಖಾನೆ ಉದ್ಘಾಟನೆಗೆ ಆಹ್ವಾನ ನೀಡಿದ್ದರು. ಆ ಮೇಲೆ ಭೇಟಿಯಾಗಿಲ್ಲ ಎಂದರು.
ಪಕ್ಷದಲ್ಲಿ ಇನ್ನಷ್ಟು ಜನರಿಗೆ ನೊಟೀಸ್ ನೀಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಉಳಿದವರಿಗೂ ನೊಟೀಸ್ ಕೊಟ್ಟಿದ್ದು, ಅವರು ಏನು ಉತ್ತರ ಕೊಡುತ್ತಾರೆ ಎನ್ನುವುದರ ಮೇಲೆ ಶಿಸ್ತು ಸಮಿತಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತದೆ. ಪಕ್ಷದ ಶಿಸ್ತು ಸಮಿತಿಗೆ ತನ್ನದೇ ಆದ ನಿಯಮಗಳಿವೆ ಎಂದು ಹೇಳಿದರು.