ಹಾವೇರಿ: ಚಾಲಕನ ನಿಯಂತ್ರಣ ತಪ್ಪಿದ ಐಶಾರಾಮಿ ಆಡಿ ಕಾರೊಂದು, ಹಿಂಬದಿಯಿಂದ ವೇಗವಾಗಿ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ (Accident) 6 ಜನ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೂಟೆಬೆನ್ನೂರು ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ.
ಧಾರವಾಡ ಮೂಲದ ಹಾಲಿ ವಸ್ತಿ ರಾಣೆಬೆನ್ನೂರು ನಗರದ 8 ಜನ ಆಡಿ ಕಾರಿನಲ್ಲಿ ಹುಬ್ಬಳ್ಳಿ ಕಡೆಗೆ ಹೋಗುತ್ತಿದ್ದರು, ಈ ವೇಳೆ ಮೂಟೆಬೆನ್ನೂರು ಬಳಿ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ಮುಂದೆ ಹೋಗುತ್ತಿದ್ದ ಲಾರಿಯ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಅಲ್ಲದೇ ಈ ಅಪಘಾತದಲ್ಲಿ 8 ಜನರ ಪೈಕಿ 6 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರಿಗೆ ಗಂಭೀರ ಗಾಯಗಳಾಗಿವೆ ಎನ್ನಲಾಗಿದೆ.
ಮೃತರನ್ನು ಫರಾನ್ (27 ವರ್ಷ), ಉಮ್ಮಿಶಿಪಾ (16 ವರ್ಚ), ಅಲಿಷಾ(20 ವರ್ಷ), ಫೂಲಖಾನ್ (17ವರ್ಷ), ಫಿರೋಜ( 42 ವರ್ಷ), ಮತ್ತೊಬ್ಬರ ಗುರುತು ಪತ್ತೆಯಾಗಿಲ್ಲ.
ಗಾಯಾಳುಗಳನ್ನು ತಷ್ಕಿನ್ ಮತ್ತು ಮೆಹಕ್ ಎನ್ನಲಾಗಿದೆ.
ಬೇಸಿಗೆ ರಜೆ ಹಿನ್ನೆಲೆಯಲ್ಲಿ ಮಕ್ಕಳೊಂದಿಗೆ ಅಗಡಿ ತೋಟಕ್ಕೆ ತೆರಳುವಾಗ ದುರ್ಘಟನೆ ಸಂಭವಿಸಿದೆ. ಮೃತರು ಅಗಡಿ ತೋಟದಿಂದ ಗೋವಾ ಪ್ರವಾಸಕ್ಕೂ ತೆರಳಲಿದ್ದರು ಎನ್ನಲಾಗಿದೆ.
ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಸ್ಥಳಕ್ಕೆ ಬ್ಯಾಡಗಿ ಪೊಲೀಸ್ ಠಾಣೆ ಸಿಬ್ಬಂದಿ ಹಾಗೂ ರಕ್ಷಣಾ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.