ದೊಡ್ಡಬಳ್ಳಾಪುರ: ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಬೆಂಗಳೂರು ಸಹಕಾರ ಹಾಲು ಒಕ್ಕೂಟದ (Bamul) ದೊಡ್ಡಬಳ್ಳಾಪುರ ನಿರ್ದೇಶಕ ಸ್ಥಾನದ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ.
ಬಿಜೆಪಿ ಮತ್ತು ಜೆಡಿಎಸ್ ಬೆಂಬಲಿತರ ನಡುವೆ ನಡೆದ ಜಿದ್ದಾಜಿದ್ದಿ ಹೋರಾಟದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಿ.ಸಿ.ಆನಂದಕುಮಾರ್ ಎರಡನೇ ಬಾರಿಗೆ ನಿರ್ದೇಶಕರಾಗಿ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಬೆಂಗಳೂರು ಡೇರಿ ವೃತ್ತ ಸಮೀಪ್ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಆವರಣದಲ್ಲಿ ಬೆಳಿಗ್ಗೆ 9-00 ಗಂಟೆಯಿಂದ ಸಂಜೆ 4-00 ಗಂಟೆಯವರೆಗೆ ಮತದಾನ ನಡೆದ ಬಳಿಕ, ಮತ ಎಣಿಕೆ ನಡೆಯಿತು.
ಈ ಹಿಂದೆ ಕಾಂಗ್ರೆಸ್ನಿಂದ ಬಮೂಲ್ ನಿರ್ದೇಶಕರಾಗಿ ನಂತರ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಿಸಿ ಆನಂದ್ ಕುಮಾರ್ ಅವರು, ಪ್ರತಿಸ್ಪರ್ಧಿ ಜೆಡಿಎಸ್ ಬೆಂಬಲಿತರಾಗಿ ಸ್ಪರ್ಧೆ ಮಾಡಿದ್ದ ಹುಸ್ಕೂರು ಟಿ ಆನಂದ್ ಅವರು ವಿರುದ್ಧ ಬರೋಬ್ಬರಿ 110 ಮತಗಳ ಅಂತರದಿಂದ ಜಯಶೀಲರಾಗಿದ್ದಾರೆ.
ಮಿತ್ರ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ನಡುವೆ ಹಣಾಹಣಿ ನಡೆದಿದ್ದು, ನಾಮಪತ್ರ ಹಿಂಪಡೆದ ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ಬೇಷರತ್ ನೀಡುವುದಾಗಿ ಘೋಷಿಸಿದ್ದರು, ಬಿಸಿ ಆನಂದ್ ಅವರ ಗೆಲುವಿನ ಓಟಕ್ಕೆ ತಡೆಯೊಡ್ಡಲು ಸಾಧ್ಯವಾಗಿಲ್ಲ.
ಇನ್ನೂ ಗೆಲುವಿನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಮೂಲ್ ನಿರ್ದೇಶಕ ಬಿಸಿ ಅನಂದ್ ಅವರು, ಮಾಜಿ ಶಾಸಕ ಟಿ ವೆಂಕಟರಮಣಯ್ಯ, ಮೂರ್ ನಾಲ್ಕು ಬಾರಿ ಸೋತ ಮುನೇಗೌಡ, ನನ್ನ ಹಿತ ಶತ್ರುಗಳು, ಒಳ ಶತ್ರುಗಳು, ಎದುರುಗಡೆ ಇರುವ ಶತ್ರುಗಳು ಎಲ್ಲರೂ ಸಹಿತ ಎಷ್ಟೇ ಕುತಂತ್ರ ಮಾಡಿದರು, ನನ್ನ ಜೊತೆಯಾಗಿ ನಿಂತ ಅನೇಕ ಜನರ ಸಹಕಾರದಿಂದ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಪ್ರಾಮಾಣಿಕ ಕೆಲಸಕ್ಕೆ ಬೆಲೆ ಇದೆ ಎಂದು ಜನತೆ ಈ ಅಭೂತಪೂರ್ವ ಗೆಲುವು ನೀಡುವ ಮೂಲಕ ತೋರಿಸಿಕೊಟ್ಟಿದ್ದಾರೆ.
ನನ್ನ ಗೆಲುವಿಗೆ ಕಾರಣರಾದ ಎಲ್ಲರಿಗೂ ನನ್ನ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಕಾಯಾ ವಾಚಾ ಮನಸಾ ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ ರೈತರ ಮನೆ ಮಗನಾಗಿ ಕೆಲಸ ಮಾಡ್ತಿನಿ ಎಂದು ಬಿಸಿ ಆನಂದ್ ಕುಮಾರ್ ಹೇಳಿದ್ದಾರೆ.