ದೊಡ್ಡಬಳ್ಳಾಪುರ: ಆಷಾಢ ಮಾಸದ ಏಕಾದಶಿ (Ekadashi) ವ್ರತಾಚರಣೆಯನ್ನು ತಾಲೂಕಿನಾದ್ಯಂತ ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಯಿತು.
ದೇವಾಲಯಗಳಲ್ಲಿ ವಿಶೇಷ ಅಲಂಕಾರ ಹಾಗೂ ಪೂಜಾ ಕಾರ್ಯಕ್ರಮಗಳು ನಡೆದವು. ಶ್ರದ್ಧಾಳುಗಳು ಏಕಾದಶಿಯಂದು ಬೆಳಗಿನ ಜಾವ ಸ್ನಾನ ಮಾಡಿ ತುಳಸಿಯನ್ನು ಅರ್ಪಿಸಿ, ಉಪವಾಸ ಆಚರಣೆ ಕೈಗೊಂಡಿದ್ದರು.
ಪ್ರಥಮ ಏಕಾದಶಿ ಅಂಗವಾಗಿ ನಗರದ ದರ್ಜಿಪೇಟೆಯ ಪಾಂಡುರಂಗಸ್ವಾಮಿ ದೇವಾಲಯದಲ್ಲಿ ವಿಶೇಷ ಅಲಂಕಾರ ಹಾಗೂ ಪೂಜಾ ಕಾರ್ಯಕ್ರಮಗಳು ನಡೆದವು.
ಬೆಳಿಗ್ಗೆ ಪಂಚಾಮೃತ ಅಭಿಷೇಕ ಏಕಾದಶಿ ಅಂಗವಾಗಿ ವಿಶೇಷ ಅಲಂಕಾರ ಹಾಗೂ ಪೂಜಾ ಕಾರ್ಯಕ್ರಮಗಳು ಹಾಗೂ ಸಂಜೆ ಪಂಡರಿ ಭಜನೆ, ವಿಷ್ಣು ಮತ್ತು ಲಲಿತಾ ಸಹಸ್ರನಾಮ ಪಾರಾಯಣ ನಡೆಯಿತು.
ತಾಲೂಕಿನ ಪಾಲನಜೋಗಿಹಳ್ಳಿಯಲ್ಲಿರುವ ಪ್ರಸಿದ್ದ ಶ್ರೀ ಪಾಂಡುರಂಗಸ್ವಾಮಿ ದೇವಾಲಯದಲ್ಲಿ ಶ್ರೀ ಪಾಂಡುರಂಗಸ್ವಾಮಿ ಭಕ್ತ ಮಂಡಲಿ ವತಿಯಿಂದ ಆಷಾಢ ಶುದ್ಧ ಏಕಾದಶಿ ಅಂಗವಾಗಿ 66ನೇ ವರ್ಷದ ಏಕಾದಶಿ ವಿಶೇಷ ಪೂಜಾ ಕಾರ್ಯಕ್ರಮ ಶ್ರದ್ಧಾ ಭಕ್ತಿ ಸಂಭ್ರಮಗಳಿಂದ ನೆರವೇರಿತು.
ಇದರ ಅಂಗವಾಗಿ ಬೆಳಿಗ್ಗೆ ಪಾಂಡುರಂಗಸ್ವಾಮಿಗೆ ಪಂಚಾಮೃತಾಭಿಷೇಕ, ನಡೆಯಿತು. ಮದ್ಯಾಹ್ನ ಬೆಳ್ಳಿ ರಥದ ಹೂವಿನ ಪಲ್ಲಕ್ಕಿ ಉತ್ಸವ ವೀರಗಾಸೆ, ಡೊಳ್ಳು ಕುಣಿತ ಉತ್ಸವಗಳೊಂದಿಗೆ ಗ್ರಾಮದ ಬೀದಿಗಳಲ್ಲಿ ಸಂಚರಿಸಿತು.
ಪಾಂಡುರಂಗ ಸ್ವಾಮಿ ಹಾಗೂ ಆಂಜನೇಯ ಸ್ವಾಮಿಯವರ ಸುರಭಿ ಭಜನಾ ಮಂಡಲಿಯಿಂದ ವಿಷ್ಣು ಸಹಸ್ರನಾಮ ಪಾರಾಯಣ,ಭಕ್ತಿಗೀತೆ,ಭಜನೆ ಹಾಗೂ ಅಖಂಡ ಭಜನೆ, ಮಂಜುಶ್ರೀ ಮೆಲೋಡಿಸ್ ಅವರಿಂದ ಭಕ್ತಿಗೀತೆಗಳ ವಾದ್ಯಗೋಷ್ಟಿ ಸಂಭ್ರಮದಿಂದ ನಡೆಯಿತು. ಸಹಸ್ರಾರು ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.