ಬೆಂಗಳೂರು: ಫೇಸ್‌ಬುಕ್, ಯೂಟ್ಯೂಬ್ಗಳಲ್ಲಿ ಬರುತ್ತಿರುವ ಕುರಿ ಸಾಕಾಣಿಕೆ (Sheep farming) ಕುರಿತಂತೆ ತಿಂಗಳಿಗೆ ಲಕ್ಷಾಂತರ ರೂ ಲಾಭ ಎಂಬ ಆಸೆಗೆ ಬಿದ್ದು ಕುರಿ ಸಾಕಾಣಿಕೆ ಆರಂಭಿಸಿದ ಯುವಕರು, ಲಕ್ಷಾಂತರ ರೂ. ನಷ್ಟಕ್ಕೆ ಒಳಗಾಗುತ್ತಿದ್ದಾರೆ.
ಹೌದು ಕುರಿ ಸಾಕಾಣಿಕೆ ಕುರಿತು ಫೇಸ್‌ಬುಕ್, ಯೂಟ್ಯೂಬ್‌ನ ವಿಡಿಯೊಗಳು ಯುವಕರನ್ನು ಸೆಳೆಯುತ್ತಿವೆ. ಇದನ್ನು ನಂಬಿ ಲಕ್ಷಾಂತರ ರೂ. ಖರ್ಚು ಮಾಡಿ, ಕುರಿ ಮರಿಗಳನ್ನು ತಂದು ಸಾಕಿದ ಯುವಕರು ಈಗ ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ.
ಪ್ರಸ್ತುತ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆಯಲ್ಲಿ ಕುರಿ ಸಾಕಾಣಿಕೆ ಆಸಕ್ತಿ ತೀವ್ರವಾಗಿದೆ. ಗ್ರಾಮಪಂಚಾಯಿತಿಯಿಂದ ನರೇಗಾ ಯೋಜನೆಯಡಿ ನೀಡಲಾಗುವ 70 ಸಾವಿರ ಪ್ರೋತ್ಸಾಹ ಧನ, NLM ಯೋಜನೆ ನಂಬಿ ಬ್ಯಾಂಕ್ ಗಳಿಂದ ಲಕ್ಷಾಂತರ ಸಾಲ ಮಾಡಿ ಶೆಡ್ ನಿರ್ಮಿಸಿ ಕುರಿಗಳನ್ನು ಸಾಕಲಾಗುತ್ತಿದೆ.
ಪ್ರಸ್ತುತ ನಾಟಿ, ಕೆಂಗುರಿ, ಎಳಗ ಕುರಿಗಳನ್ನು ಹೆಚ್ಚಾಗಿ ಸಾಕಲಾಗುತ್ತಿದೆ. ಈ ಕುರಿಗಳನ್ನು ಸಿಂಧನೂರು, ಕುಪ್ಪನ್‌ಪಲ್ಲಿ, ರಾಂಪುರ, ಗೌರಿಬಿದನೂರು, ಮಚ್ಚೇನಹಳ್ಳಿ ಸಂತೆಗಳಲ್ಲಿ ಆಯ್ಕೆ ಮಾಡಿ, ಕೊಂಡು ತಂದು ಸಾಕಲಾಗುತ್ತಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಕುರಿ ಮಾಂಸದ ಬೆಲೆ ಕೆಜಿ 700 ರಿಂದ 750 ಇದೆ. ಆದರೆ ಅದೇ ಕುರಿ ಸಾಕುವವರ ಬಳಿ ಕುರಿಗಳಿಗೆ ಬೆಲೆಯೇ ಇಲ್ಲವಾಗಿದೆ. ನಿಜವೇ ಎಂಬ ಸಂದೇಹ ಕಾಡುತ್ತಿದ್ದರೂ. ಹೌದು ಇದೇ ವಾಸ್ತವ.
30 ರಿಂದ 35 ಕೆಜಿ ತೂಗುವ ಕುರಿಯ ಬೆಲೆ 10 ಸಾವಿರದಿಂದ ಹೆಚ್ಚೆಂದರೆ 11 ಸಾವಿರಕ್ಕೆ ಮಾರಾಟವಾದರೆ ಹೆಚ್ಚು ಎನ್ನುವಂತಾಗಿದೆ. ಇನ್ನೂ ದಳ್ಳಾಳಿಗಳು ಬಳಿ ಇದೇ ತೂಕದ ಕುರಿಗಳ ಬೆಲೆ 8500 ರಿಂದ 9 ಸಾವಿರಕ್ಕೆ ಸೀಮಿತ.
ಬಕ್ರೀದ್ ಹಬ್ಬ ಸೇರಿದಂತೆ ಕಳೆದ 120 ದಿನಗಳಿಂದ ಕುರಿಗಳ ವ್ಯಾಪಾರ ತೀವ್ರವಾಗಿ ಕುಸಿದಿದ್ದು, ಕುರಿಗಳ ಬೆಲೆ ಪಾತಾಳಕ್ಕೆ ಸೇರಿದೆ. ಆದರೆ ನೆನಪಿಡಿ ಮಾಂಸದ ಬೆಲೆಯಲ್ಲಿ ಕಡಿಮೆ ಮಾತ್ರ ಆಗಿಲ್ಲ.
ಪ್ರಸ್ತುತ ಅನೇಕ ಶೆಡ್‌ಗಳಲ್ಲಿ ನೂರಾರು ಕುರಿಗಳು ಮಾರಾಟವಾಗದೆ ಉಳಿದಿವೆ. ಇದರ ಬೆನ್ನಲ್ಲೇ ಇದೇ ತಿಂಗಳ 25 ರಿಂದ ಶ್ರಾವಣ ಮಾಸ ಆರಂಭವಾಗುತ್ತಿದ್ದು, ಮಾಂಸ ಮಾರಾಟದ ಮೇಲೆ ಪರಿಣಾಮ ಬೀರಲಿದೆ. ಇದು ಕುರಿಗಳನ್ನು ಸಾಕಿರುವವರ ಆತಂಕ ಹೆಚ್ಚಿಸಿದೆ.
ಏಕೆಂದರೆ ಕುರಿಗಳನ್ನು ಸಾಕಲು ಹುಲ್ಲು, ಫೀಡ್, ಜೋಳ, ಹಿಂಡಿ ಎಂಬಂತೆ ದಿನಕ್ಕೆ ಸಾವಿರಾರು ವೆಚ್ಚ ಎದುರಾಗುತ್ತಿದ್ದು, ಯೂಟ್ಯೂಬ್ ನೋಡಿ ಕುರಿ ವ್ಯಾಪಾರದ ಕಡೆ ಆಸಕ್ತಿಯಿಂದ ಬಂದ ಯುವ ಸಮುದಾಯ ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ.
ಮತ್ತೆ ಕುರಿ ಸಾಕಾಣಿಕೆಯಲ್ಲಿ ಲಾಭ ಇಲ್ಲವೇ ಎಂಬ ಪ್ರಶ್ನೆಗೆ, ಮಾರಾಟ ಮಾಡುವ ತಂತ್ರ, ಮಾರುಕಟ್ಟೆ ಸಂಪರ್ಕ ಇದ್ದರೆ ಮಾತ್ರ ಲಾಭಗಳಿಸಲು ಸಾಧ್ಯವೇ ಹೊರತು, ಲಕ್ಷ ಲಕ್ಷ ಸಂಪಾದನೆ ಮಾಡಬಹುದೆಂಬ ಯೂಟ್ಯೂಬರ್ಗಳ ವಿಡಿಯೊಗಳನ್ನು ನೋಡಿ ಕುರಿಗಳನ್ನು ಸಾಕಲು ಮುಂದಾದರೆ ಕುರಿಗಳಾಗಬೇಕಾಗುತ್ತದೆ ಎಂಬುದು ಅನುಭವಿಗಳ ಮಾತಾಗಿದೆ.
ಮಾರುಕಟ್ಟೆ ತಿಳಿಯಬೇಕು
ಬದುಕಿಗಾಗಿ ಮಾಡುವ ವೃತ್ತಿ ಇದಾಗಿದೆ. ಮಾರುಕಟ್ಟೆ ತಿಳಿಯದೆ ವ್ಯವಹಾರಕ್ಕೆ ಬರುತ್ತಿರುವುದರಿಂದ ನಷ್ಟಕ್ಕೆ ಒಳಗಾಗುತ್ತಿದ್ದಾರೆ. ಈ ಕುರಿತಂತೆ ಯುವಕರು ಸೂಕ್ತ ಅರಿವಿನೊಂದಿಗೆ ಕುರಿ ಸಾಕಾಣಿಕೆ ಮಾಡಿದರೆ ಮಾತ್ರ ಲಾಭದಾಯವಾಗುತ್ತದೆ; ಇನಾಯತ್ ಉಲ್ಲಾಖಾನ್, ಕ್ಯೂಪಿಡ್ ನ್ಯಾಚುರಲ್ ಫಾರಂ.