ದೊಡ್ಡಬಳ್ಳಾಪುರ: ಒಳಚರಂಡಿ ಸಂಪರ್ಕ ನೀಡಲು ತೊಂದರೆ ನೀಡುವ ಮೂಲಕ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ (Standing Committee Chairman) ವಡ್ಡರಹಳ್ಳಿ ರವಿ ಕುಮಾರ್ (Ravi Kumar) ಸರ್ವಾಧಿಕಾರಿ ಧೋರಣೆ ತೋರಿಸುತ್ತಿದ್ದಾರೆಂದು ಆರೋಪಿಸಿ, ನಗರಸಭೆ ಕಾಂಗ್ರೆಸ್ ಸದಸ್ಯರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ದೊಡ್ಡಬಳ್ಳಾಪುರ ನಗರಸಭೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ನಗರಸಭಾ ಸದಸ್ಯರು ಮತ್ತು ಕಾರ್ಯಕರ್ತರು ಸ್ಥಾಯಿ ಸಮಿತಿ ಅಧ್ಯಕ್ಷರ ಸರ್ವಾಧಿಕಾರ ಧೋರಣೆಯನ್ನು ಖಂಡಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಮುಖಂಡರಾದ ಮಂಜುನಾಥ್, 28 ನೇ ವಾರ್ಡ್ ನಗರಸಭಾ ಸದಸ್ಯರು ರೂಪಿಣಿ ಮಂಜುನಾಥ್, ಪರಿಶಿಷ್ಟ ಸಮುದಾಯಕ್ಕೆ ಸೇರಿದ ಇವರ ವಾರ್ಡ್ ನಲ್ಲಿ ಯಾವುದೇ ಕಾಮಗಾರಿ ನಡೆಯದಂತೆ ಸ್ಥಾಯಿ ಸಮಿತಿ ಅಧ್ಯಕ್ಷ ವಡ್ಡರಹಳ್ಳಿ ರವಿ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಕಳೆದ ಎರಡು ತಿಂಗಳಿಂದ ಒಳ ಚರಂಡಿ ಸಂಪರ್ಕಕ್ಕೆ ಮನವಿ ಮಾಡಿದ್ದರು, ಸಂಪರ್ಕ ನೀಡದೆ ತೊಂದರೆ ನೀಡುತ್ತಿದ್ದಾರೆ.
ಪಕ್ಕದ 27ನೇ ವಾರ್ಡ್ ಸದಸ್ಯರಾದ ವಡ್ಡರಹಳ್ಳಿ ರವಿ, ನನ್ನ ವಾರ್ಡ್ ವ್ಯಾಪ್ತಿಗೆ ಸೇರಿದ ನಿವಾಸಿಗಳಿಂದ ಮತಗಳನ್ನ ಹಾಕಿಕೊಂಡಿದ್ದಾರೆ. ಆದರೆ ಮೂಲಭೂತ ಸೌಕರ್ಯಗಳನ್ನ ಮತದಾರರು ಕೇಳಿದರೆ ನನ್ನ ವಾರ್ಡ್ ಎಂದು ಸಬೂಬು ಹೇಳುತ್ತಾರೆ.
ವಾರ್ಡ್ ನಲ್ಲಿ ಯಾವುದೇ ಕಾಮಗಾರಿ ನಡೆಯದಂತೆ ತೊಂದರೆ ನೀಡುತ್ತಿದ್ದಾರೆ, ಎಲ್ಲಾ ವಾರ್ಡ್ ಗಳಿಗಲ್ಲಿಯೂ ಇವರ ಹಾವಳಿ ಹೆಚ್ಚಾಗಿದೆ. ಇದರಿಂದ ಜನರಿಗೆ ಮೂಲಭೂತ ಸೌಕರ್ಯ ಕೊಡಲು ಆಗುತ್ತಿಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಸ್ಥಳಕ್ಕೆ ಬಂದ ನಗರಸಭೆ ಅಧ್ಯಕ್ಷೆ, ಉಪಾಧ್ಯಕ್ಷ ಹಾಗೂ ಪೌರಾಯುಕ್ತರು ಒಳಚರಂಡಿ ಕಾಮಗಾರಿಯನ್ನು ತ್ವರಿತವಾಗಿ ನಡೆಸುವುದಾಗಿ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ನಗರಸಭಾ ಸದಸ್ಯರಾದ ಚಂದ್ರಮೋಹನ್, ಆನಂದ್, ಸುರೇಶ್ (ಸುಬ್ಬು), ಶಿವಕುಮಾರ್, ಆಶ್ರಯ ಸಮಿತಿ ಸದಸ್ಯ ವೆಂಕಟೇಶ್, ಮುಖಂಡರಾದ ರಮೇಶ್, ಫಯಾಝ್, ನಾಗರಾಜ್, ಶೇಖರ್, ಕುಮಾರ್,ಗಣೇಶ್, ಸುಬ್ರಹ್ಮಣಿ ಮತ್ತಿತರರಿದ್ದರು.