ಬೆಂಗಳೂರು: ಕಾಂಗ್ರೆಸ್ ಪಾಳಯದಲ್ಲಿ ಸಿಎಂ ಕುರ್ಚಿ ಕದನ ಕುರಿತು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ವ್ಯಂಗ್ಯವಾಡಿದ್ದಾರೆ.
ಕರ್ನಾಟಕದ ಮುಖ್ಯಮಂತ್ರಿ ನೋಡಲು ಸ್ಕ್ಯಾನ್ ಮಾಡಿ ಎಂದು ಕಾಂಗ್ರೆಸ್ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು. ಕರ್ನಾಟಕವು ಕನ್ನಡಿಗ ಸಿಎಂಗೆ ಮತ ಹಾಕಿದೆ. ಆದರೆ, ಹರಿಯಾಣದ ಸೂಪರ್ ಸಿಎಂ ನಮ್ಮನ್ನು ಆಳುತ್ತಿದ್ದಾರೆ. ಅವರು ಈಗ ಮಂತ್ರಿಗಳೊಂದಿಗೆ ಮಾತ್ರವಲ್ಲ, ಸರ್ಕಾರದ ಅಧಿಕಾರಿಗಳೊಂದಿಗೆ ಸಭೆಗಳನ್ನೂ ನಡೆಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ನಮ್ಮ ಹೆಮ್ಮೆಯ ಸ್ವಯಂಘೋಷಿತ ಚಾಂಪಿಯನ್ ಸಿದ್ದರಾಮಯ್ಯನವರು ರಾಜ್ಯದ ಆಡಳಿತವನ್ನು ಸದ್ದಿಲ್ಲದೆ ಹೊರಗುತ್ತಿಗೆ ನೀಡಿದ್ದಾರೆ. ನಮ್ಮ ಹೆಮ್ಮೆ ಎಲ್ಲಿದೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಪ್ರಶ್ನಿಸಿದ್ದಾರೆ.
ತಮ್ಮ ಎಕ್ಸ್ ಖಾತೆ ಪೋಸ್ಟ್‌ನಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಸ್ಕ್ಯಾನರ್ ಕೂಡ ಹಂಚಿಕೊಂಡಿದ್ದಾರೆ. ಸ್ಕ್ಯಾನ್ ಮಾಡಿದರೆ ರಣದೀಪ್ ಸುರ್ಜೇವಾಲಾರ ಫೇಸ್‌ಬುಕ್ ಖಾತೆ ತೆರೆದುಕೊಳ್ಳುತ್ತದೆ. ಕರ್ನಾಟಕದಲ್ಲಿ ಸುರ್ಜೇವಾಲ ಸರ್ಕಾರ ಅಧಿಕಾರ ನಡೆಸುತ್ತಿದೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಕಿಡಿಕಾರಿದರು.