ನವದೆಹಲಿ: ದೇಶದ ವಿದ್ಯಾರ್ಥಿಗಳಿಗೆ ಭಾರತದ ಒಟ್ಟಾರೆ ರಕ್ಷಣಾ ಪಡೆಗಳು, ಅವುಗಳ ಶಕ್ತಿ-ಸಾಮರ್ಥ್ಯ ಮತ್ತು ಸಾಧನೆಗಳ ಬಗ್ಗೆ ತಿಳಿಸಿಕೊಡುವ ಉದ್ದೇಶದಿಂದ ‘ಆಪರೇಷನ್ ಸಿಂದೂರ’ (Operation Sindoora) ಸೇನಾ ಕಾರ್ಯಾಚರಣೆಯ ಸಮಗ್ರ ಮಾಹಿತಿ ಒಳಗೊಂಡ ವಿಶೇಷ ಶೈಕ್ಷಣಿಕ ಪಠ್ಯವನ್ನು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಸಿದಪಡಿಸುತ್ತಿದೆ ಎಂದು ವರದಿಯಾಗಿದೆ.
ಭಾರತದ ರಕ್ಷಣಾ ಪಡೆಗಳ ಸಾಧನೆ ಕುರಿತ ಪಠ್ಯವನ್ನು ಎರಡು ಭಾಗಗಳಾಗಿ ವಿಂಗಡಿಸಿ ಕೇಂದ್ರ ಪಠ್ಯಕ್ರಮದಲ್ಲಿ ಸೇರಿಸಲಾಗುವುದು. ಒಂದು ಭಾಗ 4 ರಿಂದ 8 ನೇ ತರಗತಿಯ ವಿದ್ಯಾರ್ಥಿಗಳ ಪಠ್ಯದಲ್ಲಿದ್ದರೆ, ಮತ್ತೊಂದು ಭಾಗ 9ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳ ಪಠ್ಯದಲ್ಲಿ ಸೇರಿಸಲಾಗುವುದು ಎಂದಿದೆ.
ಆಪರೇಷನ್ ಸಿಂದೂರ್ ಕುರಿತ ವಿಶೇಷ ಪಠ್ಯವು ಒಟ್ಟಾರೆಯಾಗಿ 8ರಿಂದ 10 ಪುಟಗಳನ್ನು ಒಳಗೊಂಡಿರುತ್ತದೆ. ಪಹಲ್ಲಾಮ್ ಭಯೋತ್ಪಾದಕ ದಾಳಿ ನಂತರ ಭಾರತದ ಸೇನಾ ಕಾರ್ಯತಂತ್ರದ ಮೇಲೆಯೇ ಪಠ್ಯ ಹೆಚ್ಚು ಕೇಂದ್ರೀಕೃತವಾಗಿರುತ್ತದೆ ಎನ್ನಲಾಗಿದೆ.
ರಾಷ್ಟ್ರವೊಂದು ಗಡಿಯಾಚೆಗಿನ ಭಯೋತ್ಪಾದನೆ ಕೃತ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಮತ್ತು ರಾಷ್ಟ್ರೀಯ ಭದ್ರತೆಯನ್ನು ಖಾತರಿ ಪಡಿಸುವಲ್ಲಿ ದೇಶದ ರಕ್ಷಣಾ ಪಡೆಗಳ ಪಾತ್ರವೇನು? ರಾಜ ತಾಂತ್ರಿಕ ನೀತಿ ಮತ್ತು ವಿವಿಧ ಸಚಿವಾಲಯಗಳ ನಡುವಿನ ಸಮನ್ವಯತೆ ಮೊದಲಾದ ಪ್ರಮುಖ ಅಂಶಗಳನ್ನು ಪಠ್ಯ ಒಳಗೊಂಡಿರಲಿದೆ.
ದೇಶದ ರಕ್ಷಣಾ ವ್ಯವಸ್ಥೆಯನ್ನು ಉತ್ತಮ ರೀತಿ ಅರ್ಥಮಾಡಿಕೊಳ್ಳಲು ಈ ಉಪಕ್ರಮ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಲಿದೆ ಎಂದು ಮೂಲಗಳು ತಿಳಿಸಿವೆ.