ದೊಡ್ಡಬಳ್ಳಾಪುರ: ಕರ್ನಾಟಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಹೇಶ್ ಜೋಶಿಯವರ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿ, ಕನ್ನಡ ಪಕ್ಷದಿಂದ ಪತ್ರ ಚಳುವಳಿ (Letter movement) ನಡೆಸಲಾಯಿತು.
ಇದಕ್ಕೂ ಮುನ್ನ ತಾಲೂಕು ಕಚೇರಿಯಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ಮುಖಂಡರು, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ರವರ ದೂರದೃಷ್ಟಿಯ ಫಲವಾಗಿ ಸುಮಾರು 110 ವರ್ಷಗಳ ಹಿಂದೆ ಕನ್ನಡ ಕಲೆ, ಸಾಹಿತ್ಯ, ಸಂಸ್ಕೃತಿ, ಜನಪದಗಳ ಸಂವರ್ಧನೆಗಾಗಿ ಸ್ಥಾಪನೆಗೊಂಡ ಸಮಸ್ತ ಕನ್ನಡಿಗರ ಹೆಮ್ಮೆಯ ಪ್ರಾತಿನಿದಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತನ್ನು ಇತ್ತೀಚಿನ ದಿನಗಳಲ್ಲಿ ಸರ್ವಾಧಿಕಾರ, ಭ್ರಷ್ಟಚಾರಗಳ ಕೂಪದಲ್ಲಿ ಮುಳುಗಿಸಿ ದಿಕ್ಕುದೆಸೆಗಳಿಲ್ಲದಂತೆ ಮಾಡಿ ಕನ್ನಡ ಸಾಹಿತ್ಯ ಪರಿಷತ್ತಿನ ಅಸ್ತಿತ್ವ, ಘನತೆ ಮತ್ತು ಪಾವಿತ್ತೈತೆಗಳಿಗೆ ತೀವ ದಕ್ಕೆ ಉಂಟುಮಾಡುತ್ತಿದೆ.

ಈ ವಿಷಯಕ್ಕೆ ಸಂಬಂಧಪಟ್ಟ ಹಾಗೇ ಹಿರಿಯ ಸಾಹಿತಿಗಳು, ಬರಹಗಾರರು, ಹೋರಾಟಗಾರರು, ಪ್ರಶ್ನೆ ಮಾಡಿದರೆ ಅವರ ಸದಸ್ಯತ್ವವನ್ನು ರದ್ದುಗೊಳಿಸುವ ಬೆದರಿಕೆ ಪತ್ರಗಳನ್ನು ಹಾಕುತ್ತಿರುವ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಸರ್ವಾಧಿಕಾರಿ ಅಧ್ಯಕ್ಷ ಮಹೇಶ್ ಜೋಷಿ ಅವರನ್ನು ರಾಜ್ಯ ಸರ್ಕಾರ ಈ ಕೂಡಲೇ ಅಮಾನತ್ತು ಗೊಳಿಸಿ, ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಮತ್ತು ಗೌರವವನ್ನು ಉಳಿಸುವಂತೆ ಆಗ್ರಹಿಸಿದರು.
ಪ್ರಸ್ತುತ ಅಧ್ಯಕ್ಷರಾದ ಮಹೇಶ್ ಜೋಷಿರವರು ಆಯ್ಕೆಯಾದಾಗಿನಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಅಶಿಸ್ತು ಪ್ರದರ್ಶನ ಮಾಡಿಕೊಂಡು ಬಂದಿರುತ್ತಾರೆ. ಆಡಳಿತಾತ್ಮಕವಾಗಿ ಸಂವಿಧಾನ ವಿರೋಧಿ ನೀತಿಗಳನ್ನು ಅನುಸರಿಸುತ್ತ ಪ್ರಜಾಪ್ರಭುತ್ವದ ಕಗ್ಗೋಲೆ ಮಾಡುತ್ತಿದ್ದಾರೆ.
ಸಂವಿಧಾನ ಬದ್ಧವಾದ, ಸರಳವಾದ ಸುಸೂತ್ರವಾದ ಆಡಳಿತ ಸ್ನೇಹಿಯಾಗಿದ್ದ ಕನ್ನಡ ಸಾಹಿತ್ಯ ಪರಿಷತ್ ನಿಬಂಧನೆಗಳಿಗೆ ವಾಮಮಾರ್ಗದಲ್ಲಿ ತಿದ್ದುಪಡಿಗಳನ್ನು ತಂದು, ಅಧಿಕಾರ ಕೇಂದ್ರಿಕರಣ ಮಾಡಿಕೊಂಡು ಆಡಳಿತ ಮಂಡಳಿಯ ಚುನಾಯಿತ ಪ್ರತಿನಿಧಿಗಳನ್ನು ಹೆದರಿಸಿ, ಬೆದರಿಸಿ ಅವರ ಹಕ್ಕುಗಳನ್ನು ಕಸಿದುಕೊಂಡಿರುತ್ತಾರೆ.
ಹಿರಿಯ ಸಾಹಿತಿಗಳನ್ನು, ಹಿರಿಯ ಸದಸ್ಯರುಗಳನ್ನು ಅವಮಾನಿಸುತ್ತಾ, ಪ್ರಶ್ನಿಸಿದವರನ್ನು ನಿಂದಿಸುತ್ತಾ, ಹಿರಿಯರ ಸಲಹೆ ಮತ್ತು ಅಭಿಪ್ರಾಯಗಳನ್ನು ಪರಿಗಣಿಸದೆ ಕಾನೂನಿನ ಹುಸಿ ಬೆದರಿಕೆಗಳನ್ನು ಪ್ರಯೋಗಿಸುತ್ತಿರುತ್ತಾರೆ.
ಸರ್ಕಾರದಿಂದ ಬಿಡುಗಡೆಯಾಗಿರುವ ವಿವಿಧ ಮೂಲಗಳಿಂದ ಹರಿದು ಬರುವ ಕನ್ನಡಿಗರ ತೆರಿಗೆ ಹಣವನ್ನು ನೀತಿ, ನಿಯಮ, ಕಾನೂನು ಕಾಯ್ದೆಗಳನ್ನು ಮೀರಿ ದುರುಪಯೋಗ ಮಾಡಿಕೊಂಡು ಸಾಹಿತ್ಯ ಸಮ್ಮೇಳನಗಳ ಹೆಸರಿನಲ್ಲಿ ಹಣ ಲೂಟಿ ಮಾಡುತ್ತಾ, ದರ್ಪ ದೌರ್ಜನ್ಯಗಳನ್ನು ನಡೆಸುತ್ತಿರುವ ಕ.ಸಾ.ಪ.ದ ದುರಹಂಕಾರಿ, ಸರ್ವಾಧಿಕಾರಿ, ಅಧ್ಯಕ್ಷರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಸ್ವಾಭಿಮಾನಿ ಸದಸ್ಯರೆಲ್ಲರೂ ಪ್ರಶ್ನಿಸಿ ರಾಜ್ಯ ಸರ್ಕಾರಕ್ಕೆ ಸದಸ್ಯತ್ವದ ಸಂಖ್ಯೆಯೊಂದಿಗೆ ಅಮಾನತ್ತು ಗೊಳಿಸಲು ಪತ್ರ ಸಲ್ಲಿಸಲಾಗಿದೆ.
ಈಗಾಗಲೇ ಹಿರಿಯ ಸಾಹಿತಿಗಳು, ಬರಹಗಾರರು, ಹೋರಾಟಗಾರರು, ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕರಿಗಳು ಇವರ ವಿರುದ್ಧ ಕಾರ್ಯಕ್ರಮಗಳನ್ನು ರೂಪಿಸಿ ಸರ್ಕಾರದ ಗಮನಕ್ಕೆ ತಂದು ಸರ್ಕಾರ ಇವರಿಗೆ ನೀಡಿದ ಸಚಿವ ಸ್ಥಾನಮಾನದ ಸೌಲಭ್ಯಗಳನ್ನು ಹಿಂಪಡೆದುಕೊಂಡಿದೆ.
ಇವರು ನಡೆಸಿರುವ ಅವ್ಯವಹಾರಗಳನ್ನು ವಿಚಾರಣೆ ನಡೆಸಲು ಸಹಕಾರ ಇಲಾಖೆ ಆದೇಶ ಹೊರಡಿಸಿದ್ದು, ಈ ಆದೇಶಕ್ಕೆ ತಡೆನೀಡುವಂತೆ ಉಚ್ಚನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ಇವರ ಅರ್ಜಿಯನ್ನು ನ್ಯಾಯಪೀಠ ವಜಾ ಮಾಡಿರುತ್ತದೆ.
ಈ ಬೆಳವಣಿಗೆಯಿಂದ ಅಧ್ಯಕ್ಷರಾದ ಮಹೇಶ್ ಜೋಷಿರವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕಾಗಿತ್ತು. ಆದರೆ ಸ್ವಾಭಿಮಾನವೇ ಇಲ್ಲದ ಸರ್ವಾಧಿಕಾರಿ ಅಧ್ಯಕ್ಷರು ಮುಂದುವರೆಯುತ್ತಿರುವುದು ಕನ್ನಡಿಗರ ದುರ್ದೈವವಾಗಿರುತ್ತದೆ ಎಂದರು.

ಬಳಿಕ ತಹಶಿಲ್ದಾರ್ ವಿಭಾ ವಿದ್ಯಾ ರಾಥೋಡ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷ ಸಂಜೀವ್ ನಾಯಕ್, ಕಾರ್ಯದರ್ಶಿ ಆಂಜನೇಯ, ತಾಲೂಕು ಅಧ್ಯಕ್ಷ ಡಿ.ವೆಂಕಟೇಶ್, ಛಲವಾದಿ ಮಹಾಸಭಾದ ಮುಖಂಡರಾದ ಗುರುರಾಜಪ್ಪ, ರೈತಸಂಘದ ಮುತ್ತೇಗೌಡ, ಶಿವಕುಮಾರ್ ಸಂಘದ ಅಧ್ಯಕ್ಷ ರಮೇಶ್, ಹೋರಾಟಗಾರ ತೂಬಗೆರೆ ಷರಿಫ್, ಡಾ.ರಾಜ್ ಕುಮಾರ್ ಸಂಘದ ಪದಾಧಿಕಾರಿಗಳಾದ ಸುರೇಶ್, ತಿಮ್ಮರಾಜು, ಪರಮೇಶ್, ನಿವೃತ್ತ ಶಿಕ್ಷಕ ಲಿಂಗನಹಳ್ಳಿ ಬಸವರಾಜಯ್ಯ ಮತ್ತಿತರರಿದ್ದರು.