ದೊಡ್ಡಬಳ್ಳಾಪುರ: ಕಳೆದ ಕೆಲ ದಿನಗಳಿಂದ ಖಾಸಗಿ ಸುದ್ದಿ ವಾಹಿನಿಗಳಿಗೆ ಆಹಾರವಾಗಿರುವ ಬಿಗ್ ಬಾಸ್ ವಿನ್ನರ್ ಪ್ರಥಮ್ (Pratham) ಮೇಲೆ ಹಲ್ಲೆ, ಹತ್ಯೆ ಯತ್ನ ಆರೋಪದ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿರುವ ದೂರಿನ ಹಿನ್ನೆಲೆಯಲ್ಲಿ ಇಂದು ರಕ್ಷಕ್ ಬುಲೆಟ್ (Rakshak Bullet) ಅವರು ವಿಚಾರಣೆಗೆ ಒಳಗಾದರು.
ರಕ್ಷಕ್ ಬುಲೆಟ್ ಅವರೊಂದಿಗೆ ಪ್ರಮೋದ್ ಹಾಗೂ ಮಹೇಶ್ ಕೂಡ ಇದ್ದರು.
ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರು ನೀಡಿದ ನೋಟೀಸ್ ಅನ್ವಯ ವಿಚಾರಣೆಗೆ ಒಳಗಾಗಿದ್ದೇವೆ. ಪ್ರತಿಬಾರಿ ಕೇಳಿದ ಪ್ರಶ್ನೆಗೆ ಹೇಳಿದ್ದನ್ನೇ ಹೇಳುವುದು ಸರಿಯಲ್ಲ. ನಾನೋರ್ವ ನಟನ ಕುಟುಂಬದಿಂದ ಬಂದು, ಈಗತಾನೆ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿರುವೆ.
ನಾ ಯಾರನ್ನು ಇಲ್ಲಿಗೆ ಕರೆತಂದಿಲ್ಲ, ಯಾರ ಮೇಲು ದೌರ್ಜನ್ಯ ನಡೆಸಲು ಬಂದಿಲ್ಲ ಎಂದು ಆರೋಪಗಳನ್ನು ನಿರಾಕರಿಸಿದರು.
ದೊಡ್ಡಬಳ್ಳಾಪುರ ತಾಲ್ಲೂಕಿನ ರಾಮಯ್ಯನಪಾಳ್ಯ ಸಮೀಪದ ಯಲ್ಲಮ್ಮ ದೇವಾಲಯದ ವಾರ್ಷಿಕ ಪೂಜಾ ಕಾರ್ಯಕ್ರಮದಲ್ಲಿ ನಟ ಪ್ರಥಮ್ ಮೇಲೆ ನಡೆದ ಹಲ್ಲೆ, ಕೊಲೆ ಯತ್ನ ಪ್ರಕರಣದಲ್ಲಿ ದಾಖಲಾಗಿರುವ ಎಲ್ಲಾ ಆರೋಪಿತರು ಹಾಗೂ ಸ್ಥಳದಲ್ಲಿದ್ದ ಸಾಕ್ಷಿದಾರರನ್ನು ಠಾಣೆಗೆ ಕರೆಸಿಕೊಂಡು ಪೊಲೀಸರು ಹೇಳಿಕೆಗಳನ್ನು ಪಡೆಯುತ್ತಿದ್ದಾರೆ.
ಗುರುವಾರ ಸ್ಥಳ ಮಹಜರ್ಗೆ ಹಾಜರಾಗಿದ್ದ ದೂರುದಾರ ನಟ ಪ್ರಥಮ್ ರಾತ್ರಿ ಗ್ರಾಮಾಂತರ ಪೊಲೀಸ್ ಠಾಣೆಯಿಂದ ಹೊರ ಹೋಗುವ ಸಂದರ್ಭದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಕುರಿತು ವ್ಯಂಗ್ಯವಾಗಿ ಮಾತನಾಡಿದ್ದಾರೆ, ಕ್ಷೇಮೆ ಕೇಳಬೇಕು ಎಂದು ಆಗ್ರಹಿಸಿ ದಲಿತ ಸಂಘಟನೆಗಳ ಕಾರ್ಯಕರ್ತರು ಪ್ರಥಮ್ ಮುಖಕಕ್ಕೆ ಮಸಿ ಬಳಿಯಲು ಯತ್ನಿಸಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ದಲಿತ ಸಂಘಟನೆ ಕಾರ್ಯಕರ್ತರನ್ನು ತಡೆದಿದ್ದರು.
ಇಡೀ ಪ್ರಕರಣಕ್ಕೆ ಮುಖ್ಯ ಸಾಕ್ಷಿದಾರ ಎಂದು ಹೇಳಲಾಗುತ್ತಿರುವ ರಕ್ಷಕ್ ಬುಲೆಟ್ ಶುಕ್ರವಾರ ಪೊಲೀಸ್ ಠಾಣೆಗೆ ಹಾಜರಾಗಿ ಜುಲೈ 22 ರಂದು ದೇವಾಲಯ ಸಮೀಪ ನಡೆದ ಘಟನೆಗಳ ಕುರಿತು ವಿವರಣೆ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಲ್ಲೆ, ಕೊಲೆ ಯತ್ನ ಪ್ರಕರಣದ ಆರೋಪಿರಾದ ಯಶಸ್ವಿನಿ, ಬೇಕರಿ ರಘು ಅವರು ಗುರುವಾರ ನಗರದ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರಾಗಿ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ.
ಜುಲೈ 22 ರಂದು ರಾಮಯ್ಯಪಾಳ್ಯ ಸಮೀಪದ ಯಲ್ಲಮ್ಮ ದೇವಾಲಯ ವಾರ್ಷಿಕ ಪೂಜಾ ಕಾರ್ಯಕ್ರಮದಲ್ಲಿ ನಡೆದ ಗಲಾಟೆಗಳ ಕುರಿತಂತೆ ಈಗಾಗಲೇ ಕರವೇ ಕನ್ನಡಿಗರ ಬಣದ ವತಿಯಿಂದ ಪೊಲೀಸರಿಗೆ ಮನವಿಯನ್ನು ಸಲ್ಲಿಸಿ ತಾಲ್ಲೂಕಿನ ಶಾಂತಿ ಸುವ್ಯವಸ್ಥೆ ಹಾಳುಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಈಗಷ್ಟೇ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ನಟರು ಪ್ರಚಾರಕ್ಕಾಗಿ ನಡೆಸುತ್ತಿರುವ ಆರೋಪ, ಪ್ರತ್ಯೇರೋಪಗಳ ಪ್ರಕರಣವನ್ನು ಯಾವುದೇ ಒತ್ತಡಕ್ಕೆ ಮಣಿಯದೆ ಪೊಲೀಸರು ಮೊಳಕೆಯಲ್ಲೇ ಸರಿಯಾಗಿ ಚಿವುಟಿ ಹಾಕದೇ ಇದ್ದರೆ ಮುಂದಿನ ದಿನಗಳಲ್ಲಿ ತಾಲ್ಲೂಕಿನಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ, ಬೆಂಗಳೂರಿನ ರೌಡಿಸಿಂಗಳ ಗುಂಪುಗಾರಿಕೆ ಇಲ್ಲಿಯು ಬೆಳೆಯುವ ಅಪಾಯಗಳಿವೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.