ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ವಿರುದ್ಧ ಮನೆ ಕೆಲಸದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು ತೀರ್ಪು ಹೊರಡಿಸಿದೆ.
ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ದೋಷಿಯಾಗಿದ್ದಾನೆಂದು ನ್ಯಾಯಾಧೀಶರು ಘೋಷಿಸಿದ್ದಾರೆ. ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ನಾಳೆ ಪ್ರಕಟಿಸಲಿದೆ ಎಂದು ವರದಿಯಾಗಿದೆ.
ತಾಂತ್ರಿಕ ಸಾಕ್ಷ್ಯಗಳಿಗೆ ಸ್ಪಷ್ಟನೆ ಕೊಡಿ ಎಂದು ಹೇಳಿದ್ದ ಕೋರ್ಟ್ ಆರೋಪಿ ವಿರುದ್ಧ ಕೂಲಂಕಷ ಸಾಕ್ಷಾಧಾರಗಳನ್ನು ಸಂಗ್ರಹಿಸಿದ ಪರಿಶೀಲನೆ ನಡೆಸಿತ್ತು.
ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿನ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣಗೆ ಸೇರಿದ ಗನ್ನಿಗಡ ತೋಟದ ಮನೆಯಲ್ಲಿ ಮನೆಗೆಲಸದ ಮಹಿಳೆಯ ಮೇಲೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಮಾಡಿದ್ದಾರೆ ಎನ್ನುವ ಆರೋಪಕ್ಕೆ ಸಂಬಂಧಿಸಿದಂತೆ ಕೋರ್ಟ್ ವಿಚಾರಣೆ ನಡೆಸಿತ್ತು.
ಮೈಸೂರಿನ ಕೆ ಆರ್ ನಗರದ ಸಂತ್ರಸ್ತ ಮಹಿಳೆ ನೀಡಿದ ದೂರಿನ ಮೇರೆಗೆ ಸೈಬರ್ ಅಪರಾಧ ಠಾಣೆಯಲ್ಲಿ ಪ್ರಜ್ವಲ್ ವಿರುದ್ಧ ಐಪಿಸಿ ಸೆಕ್ಷನ್ 376(2)(2), 376(2)(5), 506, 354-2, 354(2), 354(2), 354(2) , 662 8 ದಾಖಲಿಸಲಾಗಿತ್ತು.
ಈ ಸಂಬಂಧ ಎಸ್‌ಐಟಿ ಅಧಿಕಾರಿಗಳು 123 ಸಾಕ್ಷ್ಯಗಳನ್ನು ಸಂಗ್ರಹಿಸಿ, ಸುಮಾರು 2 ಸಾವಿರ ಪುಟಗಳ ಆರೋಪ ಪಟ್ಟಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣಗಳ ಪೆನ್ ಡ್ರೈವ್ ವೈರಲ್ ಆದ ಬಳಿಕ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಪರಾರಿಯಾಗಿದ್ದರು. ಬಳಿಕ ವಿಶ್ವಾದ್ಯಂತ ರೆಡ್ ಕಾರ್ನರ್ ನೋಟಿಸ್ ಹೊರಡಿಸಲಾಗಿತ್ತು.
2024ರ ಮೇ 31ರಂದು ಪ್ರಜ್ವಲ್ ರೇವಣ್ಣ ಅವರನ್ನು ಪೊಲೀಸರು ಬಂಧಿಸಿದ್ದರು. ಇದಾದ ಬಳಿಕ, ಕೆ.ಆರ್.ನಗರದ ಮನೆ ಕೆಲಸದ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ರೇಪ್ ಕೇಸ್ ದಾಖಲಿಸಿಕೊಂಡಿದ್ದರು. ಕೇವಲ 7 ತಿಂಗಳಿನಲ್ಲಿ ಸಾಕ್ಷ್ಯ ವಿಚಾರಣೆ ಪೂರ್ಣಗೊಳಿಸಿದ ಜಡ್ಜ್ ಸಂತೋಷ್ ಗಜಾನನ ಭಟ್ ಅವರು ಇಂದಿಗೆ ತೀರ್ಪು ಪ್ರಕಟಿಸಿದ್ದಾರೆ.