ದೊಡ್ಡಬಳ್ಳಾಪುರ: ಹಿಂಬಾಕಿ ಪಾವತಿ ಹಾಗೂ ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಅನಿರ್ದಿಷ್ಟಾವಧಿ ಸಾರಿಗೆ ಮುಷ್ಕರಕ್ಕೆ (Bus bandh) ಕರೆ ನೀಡಿದೆ. ಆದರೆ ಈ ಕರೆ ದೊಡ್ಡಬಳ್ಳಾಪುರದಲ್ಲಿ ಯಾವುದೇ ಪರಿಣಾಮ ಬೀರಿಲ್ಲ.
ದೊಡ್ಡಬಳ್ಳಾಪುರ ನಗರ ಮತ್ತು ಗ್ರಾಮೀಣ ಪ್ರದೇಶಗಳಿಂದ ಎಲ್ಲಾ ಬಸ್ಸುಗಳಿಗೆ ಚಾಲನೆ ನೀಡಲಾಗಿದೆ. ದೊಡ್ಡಬಳ್ಳಾಪುರ ನಗರದಿಂದ ಬೆಳಗ್ಗೆ ಆರಂಭವಾಗಬೇಕಿದ್ದಾ ಎಲ್ಲಾ 33 ಬಸ್ಸುಗಳು ರಸ್ತೆಗಿಳಿದಿವೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ಮಧ್ಯಸ್ಥಿಕೆಯಲ್ಲಿ ನಡೆದ ಸಂಧಾನ ಸಭೆ ವಿಫಲವಾದ ಬಳಿಕ ನಿಗದಿಯಂತೆ ಮುಷ್ಕರ ನಡೆಸಲು ಕಾರ್ಮಿಕರ ಸಂಘಟನೆ ಮುಂದಾಗಿತ್ತು. ಈ ಮಧ್ಯೆ ಒಂದು ದಿನದ ಮಟ್ಟಿಗೆ ಮುಷ್ಕರ ಕೈಬಿಡುವಂತೆ ರಾಜ್ಯ ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ.
ಈ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರದಲ್ಲಿ ಪ್ರತಿಭಟನೆ ಕೈ ಬಿಟ್ಟು ಸಿಬ್ಬಂದಿಗಳು ಕೆಲಸಕ್ಕೆ ಹಾಜರಾಗಿದ್ದಾರೆ ಎಂದು ತಿಳಿದುಬಂದಿದೆ. ಆದಾಗ್ಯೂ 11 ಗಂಟೆಯ ಬಳಿಕ ಸಂಘದ ಮುಖ್ಯಸ್ಥರ ತೀರ್ಮಾನಕ್ಕೆ ಕಾಯುತ್ತಿದ್ದೇವೆ ಎಂದು ಹೆಸರೇಳಲು ಇಚ್ಚಿಸದ ಸಿಬ್ಬಂದಿಗಳು ಹೇಳಿದ್ದಾರೆ.
ನಾಲ್ಕು ಸಾರಿಗೆ ನಿಗಮಗಳ ನೌಕರರ ಸಂಘಟನೆಗಳು ಕರೆ ನೀಡಿರುವ ಮುಷ್ಕರದ ಹಿನ್ನೆಲೆಯಲ್ಲಿ ಸರಕಾರ ವಿವಿಧ ಹಂತದಲ್ಲಿ ಸಂಧಾನ ಸಭೆಗಳನ್ನು ಕಳೆದೊಂದು ವಾರದಿಂದ ಮಾತುಕತೆ ನಡೆಸುತ್ತಿದೆ.
ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿಯೂ ಎರಡು ಸಭೆ ನಡೆದಿದ್ದು, ನೌಕರರ ಸಂಘಟನೆ ಹಾಗೂ ಸರಕಾರದ ನಡುವೆ ಒಮ್ಮತ ಮೂಡದ ಹಿನ್ನಲೆಯಲ್ಲಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ನೌಕರರ ಸಂಘ ಕರೆ ನೀಡಿತ್ತು.
ಆದರೆ ಸರ್ಕಾರದಿಂದ ಎಸ್ಮಾ ಜಾರಿ, ನ್ಯಾಯಾಲಯದ ಆದೇಶ ಮುಷ್ಕರಕ್ಕೆ ಮುಂದಾದ ಸಿಬ್ಬಂದಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ.