ನವದೆಹಲಿ: ಮೈ ಫ್ರೆಂಡ್, ಫೇಂಡ್ ಆಫ್ ಇಂಡಿಯಾ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು ಡೋನಾಲ್ಡ್ ಟ್ರಂಪ್ (Donald Trump) ಅವರ ಪರ ಪ್ರಚಾರ ನಡೆಸಿ ಅಮೆರಿಕದ ಅಧ್ಯಕ್ಷರನ್ನಾಗಿಸಿದ ಬಳಿಕ, ಟ್ರಂಪ್ ಭಾರತಕ್ಕೆ ಮಾರಕವಾದ ನಿರ್ಣಯವನ್ನು ಕೈಗೊಳ್ಳುತ್ತಿದ್ದಾರೆ.
ಹೌದು ಇತ್ತೀಚೆಗಷ್ಟೇ ಭಾರತದ ವಸ್ತುಗಳ ಮೇಲೆ ಶೇ.25 ರಷ್ಟು ತೆರಿಗೆ ಹೇರಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ಭಾರತದ ಮೇಲಿನ ತೆರಿಗೆಯನ್ನು ಶೀಘ್ರವೇ ಇನ್ನಷ್ಟು ಹೆಚ್ಚಳ ಮಾಡುವ ಬೆದರಿಕೆ ಹಾಕಿದ್ದಾರೆ.
ರಷ್ಯಾದಿಂದ ಭಾರತ ತೈಲ ಖರೀದಿಸುತ್ತಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಟ್ರಂಪ್, ‘ಎಚ್ಚರಿಕೆಗಳ ಹೊರತಾಗಿಯೂ ರಷ್ಯಾದಿಂದ ಭಾರತ ತೈಲ ಖರೀದಿಯನ್ನು ಮುಂದುವರೆಸಿದೆ. ಆದ್ದರಿಂದ ಅವರ ಆಮದುಗಳ ಮೇಲಿನ ಸುಂಕವನ್ನು ಗಣನೀಯ ಪ್ರಮಾಣದಲ್ಲಿ ಏರಿಸುತ್ತೇನೆ’ ಎಂದು ಹೇಳಿದ್ದಾರೆ.
ಈ ಕುರಿತು ತಮ್ಮ ಒಡೆತನದ ಜಾಲತಾಣ ಟ್ರುಥ್‌ನಲ್ಲಿ ಹೇಳಿಕೆ ನೀಡಿರುವ ಟ್ರಂಪ್, ‘ಭಾರತವು ಅತ್ಯಧಿಕ ಪ್ರಮಾಣದಲ್ಲಿ ರಷ್ಯಾದಿಂದ ತೈಲವನ್ನು ಖರೀದಿಸುತ್ತಿದೆ. ಸಾಲದ್ದಕ್ಕೆ ತಾನು ಖರೀದಿಸಿದ ಹೆಚ್ಚಿನ ತೈಲವನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ದೊಡ್ಡ ಮೊತ್ತದ ಲಾಭ ಮಾಡಿಕೊಳ್ಳುತ್ತಿದೆ. ರಷ್ಯಾ ದಾಳಿಯಿಂದ ಉಕ್ರೇನ್‌ನಲ್ಲಿ ಎಷ್ಟು ಮಂದಿ ಸಾಯುತ್ತಿದ್ದಾರೆ ಎಂಬ ಬಗ್ಗೆ ಅವರು ತಲೆ ಕೆಡಿಸಿಕೊಳ್ಳುವುದಿಲ್ಲ. ಆದ್ದರಿಂದ ಅವರು ನಮಗೆ ಪಾವತಿಸುವ ತೆರಿಗೆಯನ್ನು ಇನ್ನಷ್ಟು ಏರಿಸುತ್ತೇನೆ’ ಎಂದು ಟ್ರಂಪ್ ಹೇಳಿದ್ದಾರೆ.
ಭಾರತ ಮತ್ತು ಅಮೆರಿಕದ ನಡುವೆ ವ್ಯಾಪಾರ ಒಪ್ಪಂದ ಮಾತುಕತೆಗಳು ನಡೆಯುತ್ತಿವೆ. ಹೀಗಿರುವಾಗಲೇ ಟ್ರಂಪ್, ಆ.7ರಿಂದ ಜಾರಿಗೆ ಬರುವಂತೆ ಭಾರತದ ವಸ್ತುಗಳ ಮೇಲೆ ಶೇ.25ರಷ್ಟು ಸುಂಕ ಹೇರಿದ್ದರು. ಜತೆಗೆ, ರಷ್ಯಾದಿಂದ ತೈಲ ಮತ್ತು ಶಸ್ತ್ರಾಸ್ತ್ರ ಆಮದನ್ನು ಮುಂದುವರೆಸಿದ್ದಕ್ಕಾಗಿ ಹೆಚ್ಚುವರಿ ದಂಡ ವಿಧಿಸುವುದಾಗಿ ಎಚ್ಚರಿಸಿದ್ದರು.
ಸಾಲದ್ದಕ್ಕೆ, ಪಾಕಿಸ್ತಾನದ ನಡುವೆ ನಡೆದ ಯುದ್ಧದ ಕದನ ವಿರಾಮಕ್ಕೆ ಬೇರೆಯಾವ ರಾಷ್ಟ್ರ ಮಧ್ಯೆ ತೂರಿಲ್ಲ ಎಂದು ಸಂಸತ್ ನಲ್ಲಿ ಪ್ರಧಾನಿ ಮೋದಿ ಹೇಳಿಕೆ ಬಳಿಕವೂ ಸೇರಿ ಇಲ್ಲಿಯವರೆಗೆ ಟ್ರಂಪ್ ಒಟ್ಟು 32 ಬಾರಿ ನಾನೇ ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮಕ್ಕೆ ಕಾರಣ, ನನ್ನಿಂದಲೇ ಎರಡು ದೇಶ ಯುದ್ಧ ನಿಲ್ಲಿಸಿವೆ ಎಂದಿದ್ದಾರೆ. ಅಲ್ಲದ ಭಾರತದ ಆರ್ಥಿಕತೆಯನ್ನು ‘ಮುಳುಗಿದ ಆರ್ಥಿಕತೆ’ ಎಂದು ಕರೆದಿದ್ದರು. ಈಗ ಹೆಚ್ಚುವರಿ ತೆರಿಗೆ ಹೇರುವ ಬೆದರಿಕೆ ಒಡ್ಡುತ್ತಿದ್ದಾರೆ.
ಭಾರತ ತಿರುಗೇಟು
ರಷ್ಯಾ ಜತೆಗೆ ವ್ಯಾಪಾರ ಮಾಡುವುದಕ್ಕೆ ಕಿಡಿಕಾರುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಐರೋಪ್ಯ ದೇಶಗಳಿಗೆ ಭಾರತ ಸೋಮವಾರ ತೀಕ್ಷ್ಯ ತಿರುಗೇಟು ನೀಡಿದೆ. ರಷ್ಯಾ ಜತೆ ಭಾರತದ ವ್ಯವಹಾರಕ್ಕಿಂತ ಯುರೋಪ್ ವ್ಯಾಪಾರ ಹೆಚ್ಚಿದೆ. ಅಮೆರಿಕ ಕೂಡ ರಷ್ಯಾದಿಂದ ಅಣು ಶಕ್ತಿಗೆ ಬೇಕಾದ ರಾಸಾಯನಿಕ ಆಮದು ಮಾಡಿಕೊಳ್ಳುತ್ತಿದೆ ಎಂದು ತಿವಿದಿದೆ.