ದೊಡ್ಡಬಳ್ಳಾಪುರ: ನಗರದಲ್ಲಿನ ತಾಯಿ ಮಗು ಸರ್ಕಾರಿ ಆಸ್ಪತ್ರೆಯಲ್ಲಿ 9 ತಿಂಗಳ ತುಂಬು ಗರ್ಭಿಣಿ (Pregnant) ಸಾವನಪ್ಪಿರುವ ಘಟನೆ ತಾಲೂಕಿನಾಧ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಗರ್ಭಿಣಿ ಸಾವನಪ್ಪಿರುವ ಕುರಿತಂತೆ ರಾಜಕೀಯ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿರುವ ನಡುವೆಯೇ ನಗರದ ಕನ್ನಡ ಜಾಗೃತ ಭವನದಲ್ಲಿ ಬುಧವಾರ ಸಂಜೆ ಪ್ರಗತಿಪರ ಸಂಘಟನೆಗಳ ಮುಖಂಡರು ತುರ್ತು ಸಭೆ ನಡೆಸಿದ್ದಾರೆ.
ಸರ್ಕಾರಿ ಆಸ್ಪತ್ರೆ ಹಲವಾರು ಸಮಸ್ಯೆಗಳಿಂದ ಕೂಡಿದೆ ಎಂದು ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರಾದ ಎಂ.ಕೃಷ್ಣಮೂರ್ತಿ, ಆರ್.ಚಂದ್ರತೇಜಸ್ವಿ, ಎ.ಓ.ಆವಲಮೂರ್ತಿ, ಸಂಜೀವ್ನಾಯ್ಕ್, ಕವಿತಾ, ನರೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು.
ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಬಡವರಿಗೆ ಸೂಕ್ತ ಚಿಕಿತ್ಸೆ ದೊರೆಯದಾಗಿದೆ. ಗರ್ಭಿಣಿ ಸುಶ್ಮಿತ ಸಾವಿನ ಪ್ರಕರಣ ಅತ್ಯಂತ ಗಂಭೀರವಾದ್ದು. ಇದರ ವಿರುದ್ಧ ಸೂಕ್ತ ಹೋರಾಟ ಅಗತ್ಯವಿದೆ. ಅಲ್ಲದೆ ಸರ್ಕಾರಿ ಆಸ್ಪತ್ರೆಯಲ್ಲಿನ ಸಮಸ್ಯೆಗಳ ಪರಿಹಾರವು ಆಗಬೇಕಿದೆ.
ಈ ಎಲ್ಲಾ ವಿಚಾರಗಳ ವಿರುದ್ಧ ದೊಡ್ಡ ಮಟ್ಟದ ಹೋರಾಟ ರೂಪಿಸಲು ಆಗಸ್ಟ್ 8 ರ ಸಂಜೆ 4 ಗಂಟೆಗೆ ಕನ್ನಡ ಜಾಗೃತ ಭವನದಲ್ಲಿ ತಾಲ್ಲೂಕಿನ ಎಲ್ಲಾ ಸಂಘಟನೆಗಳ ಮುಖಂಡರ ಸಭೆ ನಡೆಸಲು ಸಭೆಯಲ್ಲಿ ನಿರ್ಧಿರಿಸಲಾಯಿತು.
ಪೊಲೀಸ್ ಠಾಣೆಗೆ ದೂರು
ಗರ್ಭಿಣಿ ಸಾವನಪ್ಪಿರುವ ಕುರಿತಂತೆ ತಾಯಿ ಭಾಗ್ಯಮ್ಮ ಎನ್ನುವವರು ನಗರದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನಲ್ಲಿ ಘಟನೆ ಕುರಿತಂತೆ ಭಾಗ್ಯಮ್ಮ ವಿವರಿಸಿದ್ದಾರೆ, ನಮಗೆ ಒಟ್ಟು ಮೂರು ಜನ ಹೆಣ್ಣು ಮಕ್ಕಳು ಇದ್ದು 3ನೇ ಮಗಳು ಸುಶ್ಮ ಎಂಬುವವರಾಗಿರುತ್ತಾರೆ.
ನಮ್ಮ ಕೊನೆಯ ಮಗಳಾದ ಸುಶ್ಮ ಅವರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಮಾಗಡಿ ತಾಲ್ಲೋಕು. ಗೊಲ್ಲರಪಾಳ್ಯ ವಾಸಿ ಮಹೇಶ್ ಎಂಬುವವರಿಗೆ ಮೂರುವರೆ ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿರುತ್ತೇವೆ.
ಸುಶ್ಮ 9 ತಿಂಗಳ ಗರ್ಭಿಣಿಯಾಗಿದ್ದು ಸುಮಾರು 7 ತಿಂಗಳ ಹಿಂದೆಯೇ ಗಂಡನ ಮನೆಯಿಂದ ದೊಡ್ಡಬಳ್ಳಾಪುರ ನಗರದ ಬಸವೇಶ್ವರನಗರದ ನಮ್ಮ ಮನೆಗೆ ಕರೆದುಕೊಂಡು ಬಂದು ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸುತ್ತಿದ್ದೆವು.
ಆ.05 ರಂದು ಆಶಾ ಕಾರ್ಯಕರ್ತೆ ಜೊತೆಯಲ್ಲಿ ಬೆಳಗ್ಗೆ ಸುಮಾರು 10-30 ಗಂಟೆಯಲ್ಲಿ ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಹೋಗಿದ್ದು, ಕರ್ತವ್ಯದಲ್ಲಿದ್ದ ಮಹಿಳಾ ಸಹಾಯಕಿಯವರು ಪರೀಕ್ಷೆ ಮಾಡಿ ತಾಯಿ ಕಾರ್ಡ್ ನಲ್ಲಿ ಬರೆದಿರುವಂತೆ ಇದೇ ತಿಂಗಳ 14ರಂದು ಹೆರಿಗೆ ದಿನಾಂಕ ಇದೆ ಎಂದು ಹೇಳಿದರು.
ನಮ್ಮ ಮಗಳಿಗೆ ಉಸಿರಾಟದ ಸಮಸ್ಯೆ ಆಗುತ್ತಿದೆ ಎಂದು ನಮ್ಮ ಮಗಳು ಆಸ್ಪತ್ರೆಯಲ್ಲಿ ಹೇಳಿದ್ದು, ಬಿಪಿಗಾಗಿ ಮಾತ್ರೆಗಳನ್ನು ಕೊಟ್ಟು ಇದೇ ಗುರುವಾರದಂದು ಮತ್ತೆ ಆಸ್ಪತ್ರೆಗೆ ಬರುವಂತೆ ತಿಳಿಸಿ ಮನೆಗೆ ಕಳುಹಿಸಿಕೊಟ್ಟಿದ್ದರು.
ಆದರೆ ಆ.6 ರಂದು ಬೆಳಗಿನ ಜಾವ ಸುಮಾರು 4-30 ಗಂಟೆಯಲ್ಲಿ ನನ್ನ ಮಗಳು ಸುಶ್ಮ ಎಚ್ಚರಗೊಂಡು ನನಗೆ ಉಸಿರುಗಟ್ಟುತ್ತಿದೆ, ಸೆಖೆ ಆಗುತ್ತಿದೆ ಎಂದು ಹೇಳಿದ್ದರಿಂದ ನಾವು ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ.ಹರೀಶ್ ರವರಿಗೆ ಫೋನ್ ಮಾಡಿ ಮಾತನಾಡಿದ್ದು ತಕ್ಷಣ ಆಸ್ಪತ್ರೆಗೆ ಬರುವಂತೆ ವೈದ್ಯರು ಹೇಳಿದ್ದರು.
ಆಗ ನಾನು ನಮ್ಮ ಮೊದಲನೇ ಮಗಳು ಸುಧಾ ಅವರು ನಮ್ಮ ಪಕ್ಕದ ಮನೆಯವರ ಕಾರಿನಲ್ಲಿ ಸುಶ್ಮ ಅವರನ್ನು ಕರೆದುಕೊಂಡು ಬೆಳಗ್ಗೆ ಸುಮಾರು 6-30 ಗಂಟೆಯಲ್ಲಿ ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಸುಶ್ಮ ನನ್ನ ಮೊದಲನೇ ಮಗಳ ಜೊತೆ ಅಕ್ಕ ನನಗೆ ಉಸಿರಾಡಲು ಆಗುತ್ತಿಲ್ಲವೆಂದು ಹೇಳಿದ್ದು ವೈದ್ಯರು ಪರೀಕ್ಷಿಸುತ್ತಿರುವಾಗಲೇ ಸ್ವಲ್ಪ ಸಮಯದಲ್ಲಿ ನನ್ನ ಮಗಳು ಸುಷ್ಮ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾಳೆ.
ನನ್ನ ಮಗಳ ಸಾವಿನಲ್ಲಿ ವೈದ್ಯರ ನಿರ್ಲಕ್ಷತೆ ಬಗ್ಗೆ ಅನುಮಾನ ಇದ್ದು ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ದೂರು ನೀಡಿದ್ದಾರೆ.