Varamahalakshmi festival: ಬೆಳಗ್ಗೆ ಬೇಗ ಎದ್ದು, ನಿತ್ಯ ಕರ್ಮಗಳನ್ನು ಮುಗಿಸಿ ಶ್ರೀ ದೇವಿಯ ಪೂಜೆಯನ್ನು ಮಾಡಬೇಕು. ಸಾಯಂಕಾಲದವರೆವಿಗೂ ಉಪವಾಸ ಇರಬೇಕು.
ವ್ರತ ಮಾಡುವವರು ಸಂಕಲ್ಪ ಮಾಡಿ ದೇವಿಯನ್ನು ಕಲಶ ಮತ್ತು ವಿಗ್ರಹಗಳಲ್ಲಿ ಆವಾಹನೆ ಮಾಡಿ ಪೂಜಿಸಬೇಕು. ಕಲಶದಲ್ಲಿ ಅಕ್ಕಿ ತುಂಬಿಸಿ ಖರ್ಜೂರ, ಗೋಡಂಬಿ, ದ್ರಾಕ್ಷಿ, ಬಾದಾಮಿ, ಕಲ್ಲುಸಕ್ಕರೆ ಮತ್ತು ಕೆಲವು ಹಣ್ಣುಗಳನ್ನು ಇರಿಸಬೇಕು. ಈ ಕಳಸಕ್ಕೆ ಲಕ್ಷ್ಮೀ ಕಳಸ ಎನ್ನುತ್ತಾರೆ.
ಅದರ ಮೇಲೆ ಚಿನ್ನ ಅಥವಾ ಬೆಳ್ಳಿ ಅಥವಾ ಮಣ್ಣಿನಿಂದ ತಯಾರಿಸಿದ ಮುಖವಾಡವನ್ನಿಟ್ಟು ಅಥವಾ ತೆಂಗಿನಕಾಯಿಗೆ ಹಳದಿಯ ಹಿಟ್ಟಿನಿಂದ ಮೂಗು ಕಣ್ಣು ಕಿವಿ ಮಾಡಿ, ಒಡವೆಗಳನ್ನು ಏರಿಸಿ, ಸೀರೆ ಉಡಿಸಿ, ಅಲಂಕಾರ ಮಾಡಬೇಕಾಗುತ್ತದೆ.
ಈ ಪೂಜೆಯಲ್ಲಿ ವಿಶೇಷವಾಗಿ ದಾರಗಳಿಗೆ ಪೂಜೆಯನ್ನು ಮಾಡುವುದು. ಈ ದಾರವನ್ನು ದೋರವೆಂದು ಕರೆವರು. ಹೊಸದಾದ 12 ದಾರಗಳಿಗೆ 12 ಗಂಟುಗಳನ್ನು ಹಾಕಿ, ಅದನ್ನು ಸ್ವಲ್ಪ ನೀರಿನಲ್ಲಿ ನೆನೆಸಿ ಅರಿಶಿನ ಹಚ್ಚಿ ದೇವಿಯ ಪಕ್ಕದಲ್ಲಿರಿಸಿ ಆರಾಧಿಸಿ ಪೂಜಿಸುವುದು.
ಈ ದಾರಗಳಿಗೆ ಅರಿಶಿನ, ಕುಂಕುಮ, ಹೂವು, ಪತ್ರೆಗಳಿಂದ ಪೂಜಿಸಿ, ಧೂಪ, ದೀಪ ಹಾಗೂ ನೈವೇದ್ಯ ಮಾಡುವುದು. ಹನ್ನೆರಡು ಹೆಸರುಗಳನ್ನು ಉಚ್ಚರಿಸಿ ದ್ವಾದಶನಾಮಾವಳಿಯೆಂದು ಪೂಜಿಸುವುದು.
ಆ ನಾಮಾವಳಿಗಳು ಹೀಗಿವೆ -ರಮೆ, ಸರ್ವಮಂಗಳೆ, ಕಮಲವಾಸಿನೆ, ಮನ್ಮಥ ಜನನಿ, ವಿಷ್ಣುವಲ್ಲಭೆ, ಕ್ಷೀರಾಬ್ಧಿಕನ್ಯಕೆ, ಲೋಕಮಾತೆ, ಭಾರ್ಗವಿ, ಪದ್ಮಹಸ್ತೆ, ಪುಷ್ಪೆ, ತುಷ್ಟೆ ಮತ್ತು ವರಲಕ್ಷ್ಮಿ.
ಈ ದಾರಕ್ಕಾಗಿ ಮತ್ತು ದೇವಿಗೆ ಹೋಳಿಗೆ, ಕೊಬ್ಬರಿ ಮಿಠಾಯಿ, ಜಾಮೂನು, ಪಾಯಸ, ಜಿಲೇಬಿ ಹಾಗೂ ಚಿಗಲಿ, ತಂಬಿಟ್ಟು ಮಾಡುತ್ತಾರೆ. ವಿಶೇಷವಾಗಿ ನೈವೇದ್ಯವಾಗಿ ಸಜ್ಜಪ್ಪವನ್ನು ಅರ್ಪಿಸುವರು. ಅಂದು ಶ್ರೀಸೂಕ್ತವನ್ನು ಪಠಿಸುವುದೂ ಒಳ್ಳೆಯದು.
ದೇವಿಯ ಮೂರ್ತಿಗೂ ಅರಿಶಿನ, ಕುಂಕುಮ,ಹೂವು, ಪತ್ರೆ ಮತ್ತು ಅಕ್ಷತೆಯಿಂದ ಪೂಜೆಯನ್ನು ಸಲ್ಲಿಸಿದ ಬಳಿಕ, ಪೂಜಿಸಿದ ಹೆಣ್ಣುಮಕ್ಕಳು ಆ ದಾರಗಳಿಗೆ ಹೂವನ್ನು ಕಟ್ಟಿ, ಹಿರಿಯರಿಂದ ಕಂಕಣದಂತೆ ಬಲಗೈಗೆ ಕಟ್ಟಿಸಿಕೊಳ್ಳುವುದು. ಹಾಗೆ ಕಟ್ಟಿಸಿಕೊಂಡ ನಂತರ ಆ ಹಿರಿಯರಿಗೆ ನಮಸ್ಕರಿಸಿ ದಕ್ಷಿಣೆಯೊಂದಿಗೆ ದಾನವನ್ನು ಪುರೋಹಿತರಿಗೆ ಕೊಡುವುದು.
ಈ ಸಮಯದಲ್ಲಿ ಹೇಳುವ ಶ್ಲೋಕ ಹೀಗಿದೆ.
“ದ್ವಾದಶಗ್ರಂಥಿ ಸಂಯುಕ್ತಂ ಕೃತಂ ದ್ವಾದಶತಂತುಭಿ: ಧಾರಯಾಮಿ ಮಹಾದೇವಿ ಸೂತ್ರಂ ತೇ ಸರ್ವಮಂಗಳೇ”.
ಪೂರ್ವಕ್ಕೆ ಅಥವಾ ಉತ್ತರ ದಿಕ್ಕಿಗೆ ದೇವಿಯನ್ನು ಕೂರಿಸಬೇಕು.
ಕನಕಾಂಬರ, ಮಲ್ಲಿಗೆ, ಪತ್ರೆ,ಮರುಗ, ದವನ, ಸಂಪಿಗೆ ಹಾಗೂ ಜಾಜಿ ಹೂವ ದೇವಿಗೆ ಶ್ರೇಷ್ಠವಾದದ್ದು.
ದೇವಿಯ ಪೂಜಾ ಸಮಯವು ಬೆಳಿಗ್ಗೆ 5:35 ರಿಂದ 6:40 ರೊಳಗೆ ಹಾಗೂ 7:30 ರಿಂದ 9:00, ಸಂಜೆ 6 ರಿಂದ 7.30 ಗಂಟೆಯೊಳಗೆ ಪೂಜೆ ಮಾಡಬಹುದು.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ವಿದ್ವಾನ್ ಎಸ್.ನವೀನ್ M.A., ರಾಜ್ಯ ಜಂಟಿ ಕಾರ್ಯದರ್ಶಿ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ(ರಿ.) ಮತ್ತು ಧಾರ್ಮಿಕ ಚಿಂತಕರು ಹಾಗೂ ಸುವರ್ಣ ಕನ್ನಡಿಗ ರಾಜ್ಯ ಪ್ರಶಸ್ತಿ ಪುರಸ್ಕೃತರು.ದೊಡ್ಡಬಳ್ಳಾಪುರ. ಮೊ:9620445122