ದೊಡ್ಡಬಳ್ಳಾಪುರ: ಕಳೆದ ಮೂರು ದಿನಗಳಿಂದ ತಾಲೂಕಿನಲ್ಲಿ ಸುರಿಯುತ್ತಿರುವ ಮಳೆ (Rain) ರೈತರಲ್ಲಿ ಆತಂಕವನ್ನು ಉಂಟುಮಾಡಿದ್ದರೆ, ಹಲವೆಡೆ ಅವಾಂತರ ಸೃಷ್ಟಿಸಿದೆ. ಇದರ ಸಾಲಿಗೆ ಹೊಸಹಳ್ಳಿ ರಸ್ತೆಯಲ್ಲಿ ಮರ ಬಿದ್ದಿರುವುದು ಸೇರಿದೆ.
ಶುಕ್ರವಾರ ದೊಡ್ಡಬಳ್ಳಾಪುರ ತಾಲೂಕಿನಲ್ಲಿ 29.16 ಮಿಮೀ ಮಳೆಯಾಗಿದೆ. ಇದರಲ್ಲಿ ಕಸಬಾ 24.9 ಮಿಮೀ, ದೊಡ್ಡಬೆಳವಂಗಲ 14.3 ಮಿಮೀ, ಮಧುರೆ 26.3 ಮಿಮೀ, ಸಾಸಲು 35.8 ಮಿಮೀ ಹಾಗೂ ತೂಬಗೆರೆ ಹೋಬಳಿ ವ್ಯಾಪ್ತಿಯಲ್ಲಿ 44.5ಮಿಮೀ ಮಳೆ ಸುರಿದಿದೆ.
ಇನ್ನೂ ಶನಿವಾರ ಸಂಜೆಯಿಂದ ತಾಲೂಕಿನ ಅನೇಕ ಕಡೆಗಳಲ್ಲಿ ಮತ್ತೆ ಮಳೆ ಆರ್ಭಟಿಸಿದ್ದು, ಸಂಜೆ ದೊಡ್ಡಬಳ್ಳಾಪುರ ಹಾಗೂ ಹೊಸಹಳ್ಳಿ ನಡುವಿನ ಗುಂಡಮಗೆರೆ ಕೆಇಬಿ ಸಮೀಪ ಮರವೊಂದು ರಸ್ತೆಗೆ ಅಡ್ಡಲಾಗಿ ಮುರಿದು ಬಿದ್ದಿದೆ.
ಇದರಿಂದಾಗಿ ವಾಹನ ಸಂಚಾರ ಅಸ್ತವ್ಯಸ್ತವಾಗಿದ್ದು, ಮಳೆಯಲ್ಲಿ ವಾಹನ ಸವಾರರು ಪರದಾಡುವಂತಾಗಿತ್ತು. ಅಲ್ಲದೆ ಅನೇಕ ಬೈಕ್ ಸವಾರರು ನಿಯಂತ್ರಣ ತಪ್ಪಿ ಬಿದ್ದು ಗಾಯಗೊಂಡಿದ್ದಾರೆ.