ಬೆಂಗಳೂರು: ಕೆಲ ಖಾಸಗಿ ಚಾನಲ್‌ಗಳ ಟ್ರಾಪ್ಗೆ ಒಳಗಾಗಿ, ಸ್ವಪಕ್ಷದ ವಿರುದ್ಧವೇ ಮುಜುಗರ ತರುವಂತ ಪ್ರತಿಕ್ರಿಯೆ ನೀಡಿದ್ದ ಸಹಕಾರ ಸಚಿವ ಕೆ.ಎನ್. ರಾಜಣ್ಣ (K.N.Rajanna) ಅವರನ್ನು ಸಚಿವ ಸಂಪುಟದಿಂದ ಕೈಬಿಡಲಾಗಿದೆ.
ಕೆಲ ಖಾಸಗಿ ಚಾನಲ್ ವರದಿಗಾರರ ಪ್ರಶ್ನೆಗಳಿಗೆ ಉತ್ತರ ನೀಡುವ ವೇಳೆ ಬೇಕಾಬಿಟ್ಟಿ ಮಾತಾಡಿದ್ದು, ರಾಜಣ್ಣ ಅವರ ಸಚಿವ ಸ್ಥಾನಕ್ಕೆ ಮುಳ್ಳಾಗಿದೆ.
ಈ ಮುನ್ನ ರಾಜಣ್ಣ ಮಾಡಿದ್ದ ಹನಿಟ್ರಾಪ್ ಆರೋಪ ತನಿಖೆಯಲ್ಲಿ ಸುಳ್ಳೆಂದು ಸಾಬೀತು ಆಯ್ತು, ಸೆಪ್ಟೆಂಬರ್ ತಿಂಗಳಲ್ಲಿ ರಾಜ್ಯದಲ್ಲಿ ಕ್ರಾಂತಿ ಆಗುತ್ತೆ ಎಂದಿದ್ದ ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ಕೈಬಿಡುವ ಮೂಲಕ ಆಗಸ್ಟ್ ತಿಂಗಳಲ್ಲಿಯೇ ಹೈಕಮಾಂಡ್ ಬಿಸಿ ಮುಟ್ಟಿಸಿದೆ.
ಸಹಕಾರ ಸಚಿವ KN ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ತಕ್ಷಣದಿಂದ ಜಾರಿಗೆ ಬರುವಂತೆ ತೆಗೆದುಹಾಕುವ ಕುರಿತು ಮಾನ್ಯ ರಾಜ್ಯಪಾಲರು ಸಹಿ ಮಾಡಿದ ಮೂಲ ಅಧಿಸೂಚನೆಯನ್ನು ಇದರೊಂದಿಗೆ ಕಳುಹಿಸಲು ಸೂಚಿಸಲಾಗಿದೆ ಎಂದು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್.ಪ್ರಭುಶಂಕರ್ ಪತ್ರ ಬರೆದಿದ್ದಾರೆ.
ರಾಹುಲ್ ಗಾಂಧಿ ಅವರು ವೋಟರ್ ಐಡಿ ಮತ್ತು ಮತದಾನ ವಿಚಾರದಲ್ಲಿ ಅಕ್ರಮ ನಡೆದಿದೆ ಎಂದು ಹೋರಾಟ ಮಾಡಿದ್ದರು. ಆದರೆ, ಸಹಕಾರ ಸಚಿವ ಕೆ.ಎನ್. ರಾಜಣ್ಣ ಇದನ್ನು ವಿರೋಧಿಸಿ, ಆಗ ನಮ್ಮ ಸರ್ಕಾರವೇ ಅಧಿಕಾರದಲ್ಲಿತ್ತು. ನಮಗೇ ಅವಮಾನ ಆಗಬೇಕು ಎಂದು ಚಾನಲ್ ಗಳ ಪ್ರಶ್ನಗೆ ಪ್ರತಿಕ್ರಿಯೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ವೋಟರ್ ಐಡಿ ವಿಷಯದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ ಕಾಂಗ್ರೆಸ್ ಪಕ್ಷದ ಶಿಸ್ತು ಉಲ್ಲಂಘಿಸಿದ ಆರೋಪ ಹಿನ್ನೆಲೆ ಸಹಕಾರ ಸಚಿವ ಕೆ.ಎನ್. ರಾಜಣ್ಣ ವಿರುದ್ಧ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲಿಯೇ ಅಧಿವೇಶನದ ಮೊದಲ ದಿನವೇ ಕೆ.ಎನ್. ರಾಜಣ್ಣ ರಾಜೀನಾಮೆ ಸಲ್ಲಿಕೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.