ದೊಡ್ಡಬಳ್ಳಾಪುರ: ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಅವರ ಕುರಿತು ಅವಹೇಳನಾಕಾರಿಯಾಗಿ ಮಾತನಾಡಿರುವುದು ಖಂಡನೀಯ. ಕೂಡಲೇ ಬಹಿರಂಗವಾಗಿ ರಾಜ್ಯದ ದಲಿತ ಸಮುದಾಯಗಳ ಕ್ಷಮೆ ಕೋರಬೇಕು. ಕೂಡಲೇ ಅವರ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಜಯ್ ಕುಮಾರ್ (Ajay Kumar) ಒತ್ತಾಯಿಸಿದರು.
ಈ ಕುರಿತಂತೆ ಒತ್ತಾಯಿಸಿರುವ ಅವರು, ಪ್ರಧಾನಿ ಮೋದಿ ಅವರ ಜನವಿರೋಧಿ, ದೇಶ ವಿರೋಧಿ ನೀತಿ, ನಿಯಮಗಳನ್ನು ಯಾರು ಪ್ರಶ್ನೆ ಮಾಡುವಂತೆಯೇ ಇಲ್ಲ ಎಂಬ ಹಿಟ್ಲರ್ ಧೋರಣೆ ಬಿಜೆಪಿ ಮುಖಂಡರದ್ದಾಗಿದೆ.
ಇದು ಪ್ರಜಾಪ್ರಭುತ್ವ ದೇಶ, ಬಿಜೆಪಿ ನಾಯಕರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸೋನಿಯಾಗಾಂಧಿ, ಕಾಂಗ್ರೆಸ್ ಸರ್ಕಾರ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರ ವಿರುದ್ಧ ಬೇಕಾಬಿಟ್ಟಿಯಾಗಿ ಪ್ರಶ್ನೆ ಮಾಡುತ್ತಲೇ ಇರುತ್ತಾರೆ. ಆದರೆ ನಮ್ಮ ಪಕ್ಷದ ನಾಯಕರು ಬಿಜೆಪಿಯವರಂತೆ ವರ್ತಿಸಲ್ಲ.
ಬಿಜೆಪಿ ದೇಶದಲ್ಲಿ ಪ್ರಜಾಪ್ರಭುತ್ವ ಆತಂಕಕ್ಕೆ ತಳ್ಳಿದೆ. ಇಲ್ಲಿ ಯಾರು ಪ್ರಧಾನಿಯ ಮೋದಿ ಅವರ ಲೋಪಗಳನ್ನು ಪ್ರಶ್ನೆ ಮಾಡಬಾರದು ಎಂಬ ಮನಸ್ಥಿತಿ ಬೆಳೆಸಿಕೊಂಡಿದ್ದಾರೆ, ಇದು ಖಂಡನೀಯ.
ಕಾಂಗ್ರೆಸ್ ಪಕ್ಷದಲ್ಲಿ ರಾಜಕೀಯವಾಗಿ ಬೆಳೆದ ಛಲವಾದಿ ನಾರಾಯಣಸ್ವಾಮಿ, ಬಿಜೆಪಿಯ ನಾಯಕರನ್ನು ಮೆಚ್ಚಿಸಲು ರಾಜ್ಯದ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಅವಹೇಳನಾಕರಿಯಾಗಿ ಮಾತನಾಡಿರುವುದು ಅವರ ಸ್ಥಾನಮಾನಕ್ಕೆ ಶೋಭೆ ತರುವುದಿಲ್ಲ. ಪ್ರತಿಪಕ್ಷ ನಾಯಕನ ಸ್ಥಾನದಲ್ಲಿ ಅವರು ಇರುವುದಕ್ಕೂ ಅರ್ಹರಲ್ಲ.
ರಾಜಕೀಯವಾಗಿ ಏನು ಬೇಕಾದರೂ ಆರೋಪ, ಪ್ರತ್ಯಾರೋಪಗಳನ್ನು ಮಾಡಿಕೊಳ್ಳಲಿ. ಆದರೆ, ತೀರಾ ವ್ಯಕ್ತಿಗತವಾಗಿ ಗುರಿಯಾಗಿಸಿಕೊಂಡು ಮಾತನಾಡುವ ಅವರ ಭಾಷೆ ಹಾಗೂ ಅವರು ಬಳಸುವ ಪದಗಳು ಅವರ ಘನತೆಗೆ ಕುಂದು ತರುವಂತಹದ್ದಾಗಿದೆ. ಅವರು, ಕೇವಲ ಪ್ರಿಯಾಂಕ್ ಖರ್ಗೆ ಅವರನ್ನು ಮಾತ್ರ ನಾಯಿಗೆ ಹೋಲಿಸಿಲ್ಲ. ಇಡೀ ಸಮುದಾಯಕ್ಕೆ ಮಾಡಿರುವ ಅಪಮಾನವಾಗಿದೆ.
ಬಿಜೆಪಿ ನಾಯಕರಿಂದ ರಾಜ್ಯಕ್ಕೆ ಅನ್ಯಾಯವಾದಾಗ ನೇರವಾಗಿ ಖಂಡಿಸುತ್ತಲೇ ಬಂದಿದ್ದಾರೆ. ಆದರೆ, ಅವರನ್ನು ರಾಜಕೀಯವಾಗಿ ಹಣಿಯಬೇಕು ಎನ್ನುವ ಉದ್ದೇಶದಿಂದ ಬಿಜೆಪಿಯವರು, ಛಲವಾದಿ ನಾರಾಯಣಸ್ವಾಮಿ ಅವರ ಮೂಲಕ ಟೀಕೆ ಮಾಡಿಸುತ್ತಿದ್ದಾರೆ.
ಈ ಕುರಿತಂತೆ ಛಲವಾದಿ ನಾರಾಯಣಸ್ವಾಮಿ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಅಜಯ್ ಕುಮಾರ್ ತಿಳಿಸಿದ್ದಾರೆ.