ಶಿವಮೊಗ್ಗ: ರಾಜಕೀಯ ಕೆಸರೆರಚಾಟ, ಎಡಬಿಡದೆ ಸುರಿಯುತ್ತಿದ್ದ ಮಳೆಯ ನಡುವೆಯೂ ಸೋಮವಾರ ಮಧ್ಯಾಹ್ನ ಸಾಗರ ತಾಲೂಕಿನ ಅಂಬಾರ ಗೋಡ್ಲು-ಕಳಸವಳ್ಳಿ ನಡುವಿನ ಶರಾವತಿ ಹಿನ್ನೀರಲ್ಲಿ ನಿರ್ಮಿಸಿದ ಸಿಗಂದೂರು ನೂತನ ತೂಗು ಸೇತುವೆಯನ್ನು (SigandooruBridge) ಕೇಂದ್ರದ ಹೆದ್ದಾರಿ ಹಾಗೂ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ (Nitin Gadkari) ಲೋಕಾರ್ಪಣೆ ಮಾಡಿದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿಜೆಪಿ ಸಂಸ ದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದರಾದ ಬಿ.ವೈ. ರಾಘವೇಂದ್ರ, ಕೋಟ ಶ್ರೀನಿವಾಸ ಪೂಜಾರಿ, ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರಾದ ಆರಗ ಜ್ಞಾನೇಂದ್ರ, ಎಸ್.ಎನ್. ಚನ್ನಬಸಪ್ಪ, ಗುರುರಾಜ ಗಂಟಿಹೊಳಿ, ಸಿಮೆಂಟ್ ಮಂಜು, ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ, ಭಾರತಿ ಶೆಟ್ಟಿ, ಮಾಜಿ ಸಚಿವರಾದ ಕಾಗೋಡು ತಿಮಪ್ಪ, ಹರತಾಳು ಹಾಲಪ್ಪ, ಮಾಜಿ ಶಾಸಕರಾದ ಎಸ್.ರುದ್ರೇಗೌಡ, ಅಶೋಕನಾಯ್ಕ, ಕೆ.ಜಿ.ಕುಮಾರಸ್ವಾಮಿ, ಸಿಗಂದೂರು ಕ್ಷೇತ್ರದ ಧರ್ಮದರ್ಶಿ ಎಸ್.ರಾಮಪ್ಪ ಉಪಸ್ಥಿತರಿದ್ದರು.
📍Karnataka Tour 🛣#PragatiKaHighway #GatiShakti @JoshiPralhad @BSYBJP @BYRBJP @BYVijayendra pic.twitter.com/wd6bClbIDL
— Nitin Gadkari (@nitin_gadkari) July 14, 2025
ಕಾಂಗ್ರೆಸ್ ಸಚಿವರು, ಶಾಸಕರ ಗೈರು
ಲೋಕಾರ್ಪಣೆಗೆ ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಯನ್ನು ಆಹ್ವಾನಿಸುವಲ್ಲಿ ಶಿಷ್ಟಾಚಾರ ಪಾಲನೆ ಆಗಿಲ್ಲ ಎಂದು ಅಸಮಾಧಾನ ಗೊಂಡಿದ್ದ ಸಿಎಂ ಸಿದ್ದರಾಮಯ್ಯ, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಂತೆ ಪಕ್ಷದ ಸಚಿವರು, ಶಾಸಕರಿಗೆ ಸೂಚನೆ ನೀಡಿದರು.
ಹೀಗಾಗಿ ಸಚಿವ ಸತೀಶ್ ಜಾರಕಿಹೊಳಿ ಸೋಮವಾರ ಸಾಗರ ಪಟ್ಟಣಕ್ಕೆ ಬಂದರೂ ಸೇತುವೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೇ ವಾಪಸ್ ಮರಳಿದರು.
ಶಿವಮೊಗ್ಗ ಜಿಲ್ಲೆ ಉಸ್ತುವಾರಿ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ, ಸಾಗರ ಶಾಸಕ ಬೇಳೂರು ಗೋಪಾಲ ಕೃಷ್ಣ ಸೇರಿ ಕಾಂಗ್ರೆಸ್ ನಾಯಕರು ಗೈರು ಹಾಜರಾದರು.
ಸಂಸದ ರಾಘವೇಂದ್ರ ಪ್ರತಿಕ್ರಿಯೆ
ರಾಜ್ಯ ಸರ್ಕಾರದ ಆರೋಪಕ್ಕೆ ಸಂಸದ ಬಿವೈ ರಾಘವೇಂದ್ರ (B.Y.Raghavendra) ಪ್ರತಿಕ್ರಿಯೆ ನೀಡಿದ್ದು, ಈ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಮುಂಚಿತವಾಗಿ ಅಂದರೆ ಇದೇ ತಿಂಗಳ ಜುಲೈ 09 ರಂದು ಅಂಬಾರಗೋಡ್ಲು – ಕಳಸವಳ್ಳಿ – ಸಿಗಂದೂರು ಸೇತುವೆ ಉದ್ಘಾಟನೆಗೆ ನಾನು ಗೌರವಯುತವಾಗಿ ಆಹ್ವಾನ ನೀಡಿದ್ದೇನೆ. ಆದರು ಹಿರಿಯರಾದ ಸಿದ್ದರಾಮಯ್ಯ ಅವರು ಆಹ್ವಾನ ತಲುಪಿರುವುದು ತಡವಾಗಿದೆ ಎಂದು ಸಾರ್ವಜನಿಕವಾಗಿ ಹೇಳುತ್ತಿರುವುದು ಎಷ್ಟು ಸಮಂಜಸ.
ಶರಾವತಿ ನದಿಗೆ ಕಟ್ಟಿರುವ ಈ ಸೇತುವೆ ಆರು ದಶಕಗಳ ಸಾವಿರಾರು ಜನರ ಹೋರಾಟದ ಬೆವರಿನ ಪ್ರತಿಫಲ. ಇಷ್ಟು ಮಾತ್ರವಲ್ಲದೆ, ಸಾವಿರಾರು ಜನರ ಭಾವನೆಗಳ ಪ್ರತಿರೂಪ. ಅವರೆಲ್ಲರ ಭಾವನೆಗಳಿಗೆ ಘಾಸಿ ಮಾಡಬೇಡಿ ಎಂದು ಮನವಿ ಮಾಡುತ್ತೇನೆ.
ವಿವಿಧ ವಿಚಾರಗಳಲ್ಲಿ ಪರಸ್ಪರ ರಾಜಕೀಯ ಮಾಡುವುದು ಸರಿ. ಆದರೆ ಆಹ್ವಾನ ಪತ್ರಿಕೆ ಮುಂಚಿತವಾಗಿ ತಲುಪಿಯು ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವುದು ಶರಾವತಿ ಹಿನ್ನೀರಿನ ಪ್ರದೇಶದ ಜನತೆಗೆ ನೀವು ಮಾಡುವ ಅವಮಾನ ಎಂದು ಭಾವಿಸುತ್ತೇನೆ. ಈ ಕೂಡಲೇ ರಾಜ್ಯದ ಜನತೆಯ ಮುಂದೆ ತಮ್ಮ ಹೇಳಿಕೆ ಹಿಂಪಡೆದು ನಿಜಾಂಶ ತಿಳಿಸುವ ಪ್ರಯತ್ನ ಮಾಡಬೇಕು ಎಂದು ಒತ್ತಾಯಿಸುತ್ತೇನೆ.
ಈ ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಅವರಿಗೆ ಮುಂಚಿತವಾಗಿ ಅಂದರೆ ಇದೇ ತಿಂಗಳ ಜುಲೈ 09 ರಂದು ಅಂಬಾರಗೋಡ್ಲು – ಕಳಸವಳ್ಳಿ – ಸಿಗಂದೂರು ಸೇತುವೆ ಉದ್ಘಾಟನೆಗೆ ನಾನು ಗೌರವಯುತವಾಗಿ ಆಹ್ವಾನ ನೀಡಿದ್ದೇನೆ. ಆದರು ಹಿರಿಯರಾದ ಶ್ರೀ ಸಿದ್ದರಾಮಯ್ಯ ಅವರು ಆಹ್ವಾನ ತಲುಪಿರುವುದು ತಡವಾಗಿದೆ ಎಂದು ಸಾರ್ವಜನಿಕವಾಗಿ… pic.twitter.com/UaLjJWUWHL
— B Y Raghavendra (@BYRBJP) July 14, 2025
ಇಷ್ಟಲ್ಲದೆ, ಕೇಂದ್ರ ಭೂಸಾರಿಗೆ ಮಂತ್ರಾಲಯ ಸಚಿವರಾದ ಸನ್ಮಾನ್ಯ ಶ್ರೀ ನಿತಿನ್ ಗಡ್ಕರಿ ಅವರು ಇದೇ ತಿಂಗಳ ಜುಲೈ 11 ರಂದು ಖುದ್ದು ಮಾನ್ಯ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಅಧಿಕೃತವಾಗಿ ಆಹ್ವಾನ ನೀಡಿರುತ್ತಾರೆ ಎಂಬುದನ್ನು ಕ್ಷೇತ್ರದ ಜನತೆಯ ಗಮನಕ್ಕೆ ತರಲು ಇಚ್ಛಿಸುತ್ತೇನೆ ಎಂದಿದ್ದಾರೆ.
ಪ್ರಧಾನಿಗೆ ಸಿಎಂ ಪತ್ರ
ಇನ್ನೂ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಕೇಂದ್ರ ಸರ್ಕಾರದ ಭೂಸಾರಿಗೆ ಮತ್ತು ಹೆದ್ದಾರಿ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಆಯೋಜಿಸಿದ್ದ ಸಮಾರಂಭದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಪತ್ರ ಬರೆದಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ (Cmsiddaramaiah) ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪತ್ರದ ಸಾರಾಂಶ ಹೀಗಿದೆ
ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಅಂಬಾರಗೋಡ್ಲು – ಕಳಸವಳ್ಳಿ ಸೇತುವೆ ಉದ್ಘಾಟನೆಯೂ ಸೇರಿದಂತೆ ಹಲವು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ.
ರಾಜ್ಯ ಸರ್ಕಾರವನ್ನು ಸಂಪರ್ಕಿಸದೆ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು ಮಾತ್ರವಲ್ಲ, ಮುಂಚಿತವಾಗಿ ಕಾರ್ಯಕ್ರಮ ಆಯೋಜನೆಯ ವಿಷಯವನ್ನು ತಿಳಿಸದೆ ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರನ್ನು ಕೂಡ ಮುದ್ರಿಸಲಾಗಿತ್ತು.
ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕುವುದರಿಂದ ಹಿಡಿದು ಆಹ್ವಾನ ನೀಡುವ ವರೆಗೆ ಎಲ್ಲಾ ಹಂತಗಳಲ್ಲಿಯೂ ಶಿಷ್ಟಾಚಾರ ಉಲ್ಲಂಘನೆ ಮಾಡಲಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಂಘರ್ಷಕ್ಕೆ ಕಾರಣವಾಗಬಹುದಾದ ಈ ನಡೆ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದುದು.
ಇದನ್ನು ರಾಜ್ಯ ಸರ್ಕಾರವು ಬಲವಾಗಿ ಖಂಡಿಸುತ್ತದೆ. ಮುಂದಿನ ದಿನಗಳಲ್ಲಿ ಇಂತಹ ಲೋಪಗಳಾಗದಂತೆ ತಮ್ಮ ಎಲ್ಲಾ ಸಂಪುಟ ಸಹೋದ್ಯೋಗಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡುತ್ತೀರೆಂದು ನಾನು ಭಾವಿಸಿದ್ದೇನೆ ಎಂದಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಕೇಂದ್ರ ಸರ್ಕಾರದ ಭೂಸಾರಿಗೆ ಮತ್ತು ಹೆದ್ದಾರಿ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಆಯೋಜಿಸಿದ್ದ ಸಮಾರಂಭದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿರುವ ಬಗ್ಗೆ ಪ್ರಧಾನಿ @narendramodi ಅವರಿಗೆ ಪತ್ರ ಬರೆದಿದ್ದೇನೆ.
— Siddaramaiah (@siddaramaiah) July 14, 2025
ನನ್ನ ಪತ್ರದ ಸಾರಾಂಶ ಹೀಗಿದೆ;
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ… pic.twitter.com/nAb5ftF0K6