ನವದೆಹಲಿ: ಸೋಮವಾರದಿಂದ ಆರಂಭವಾಗಿರುವ ಮುಂಗಾರು ಅಧಿವೇಶನದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಮುಗಿಬೀಳಲು ವಿರೋಧ ಪಕ್ಷಗಳು ಸಿದ್ದವಾಗಿವೆ. ಆದರೆ ಇದರ ನಡುವೆಯೇ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಎರಡು ದಿನಗಳ ಯುಕೆ, ಮಾಲ್ಡೀವ್ಸ್ ಪ್ರವಾಸಕ್ಕೆ ಹೊರಟಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಹೌದು ಪಹಲ್ಗಾಮ್ ಉಗ್ರರ ದಾಳಿ, ಪಾಕಿಸ್ತಾನದ ವಿರುದ್ಧ ನಡೆದ ಆಪರೇಷನ್ ಸಿಂಧೂರ, ಕದನ ವಿರಾಮ ಘೋಷಣೆ ಬಳಿಕ ಸೋಮವಾರದಿಂದ ಆರಂಭವಾಗಿರುವ ಮುಂಗಾರು ಅಧಿವೇಶನ, ದೇಶವಾಸಿಗಳಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರದಿಂದ ಯುನೈಟೆಡ್ ಕಿಂಗ್‌ಡಮ್ ಮತ್ತು ಮಾಲ್ಡೀವ್ಸ್‌ಗೆ ಎರಡು ರಾಷ್ಟ್ರಗಳ ಭೇಟಿಯನ್ನು ಕೈಗೊಳ್ಳಲಿದ್ದಾರೆ.
ಜುಲೈ 23-24 ರವರೆಗೆ ಪ್ರಧಾನಿ ಮೋದಿ ಅವರು ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರ ಆಹ್ವಾನದ ಮೇರೆಗೆ ಯುಕೆಗೆ ಭೇಟಿ ನೀಡಲಿದ್ದಾರೆ, ಇದು ಅವರ ದೇಶಕ್ಕೆ ಅವರ ನಾಲ್ಕನೇ ಭೇಟಿಯಾಗಿದೆ.
ವ್ಯಾಪಾರ, ರಕ್ಷಣೆ, ಹವಾಮಾನ ಕ್ರಮ, ಆರೋಗ್ಯ ಮತ್ತು ಶಿಕ್ಷಣದ ಸುತ್ತ ಕೇಂದ್ರೀಕೃತವಾದ ಚರ್ಚೆಗಳೊಂದಿಗೆ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆ (CSP) ಯ ಪ್ರಗತಿಯನ್ನು ಎರಡೂ ಕಡೆಯವರು ಪರಿಶೀಲಿಸುವ ನಿರೀಕ್ಷೆಯಿದೆ.
ಆದರೆ ಲೋಕಸಭೆ ಅಧಿವೇಶನದ ನಡುವೆಯೇ ಪ್ರಧಾನಿ ಮೋದಿ ಅವರ ಪ್ರವಾಸ ಕೈಗೊಂಡಿರುವುದು ವಿರೋಧ ಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಪ್ರಶ್ನೆಗಳಿಗೆ ಉತ್ತರಿಸಲಾಗದೆ ಪ್ರಧಾನಿ ಮೋದಿ ಅವರು ಪಲಾಯನವಾದ ಅನುಸರಿಸುತ್ತಿದ್ದಾರೆ ಎಂದು ನೆಟ್ಟಿಗರು ಕಿಚಾಯಿಸುತ್ತಿದ್ದಾರೆ.
ಪಹಲ್ಗಾಮ್ ಉಗ್ರರ ದಾಳಿಯ ಭದ್ರತಾ ಲೋಪ, ಪಾಕಿಸ್ತಾನದ ವಿರುದ್ಧ ಭಾರತೀಯ ಸೇನೆಯ ದಿಟ್ಟ ಆಪರೇಷನ್ ಸಿಂಧೂರ ಕಾರ್ಯಚರಣೆಗೆ ಏಕಾಏಕಿ ಕದನ ವಿರಾಮ ಘೋಷಣೆ, ಸೀಸ್ ಫೈರ್ ಕುರಿತು ಅಮೇರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ 24 ಬಾರಿ ಬಡಾಯಿಕೊಚ್ಚಿಕೊಂಡಿರುವುದು, 5 ಯುದ್ಧ ವಿಮಾನಗಳ ಪತನದ ಕುರಿತು ಉವಾಚದ ಕುರಿತಂತೆ ವಿರೋಧ ಪಕ್ಷಗಳ ಪ್ರಶ್ನೆಗೆ ಕೇಂದ್ರ ಸರ್ಕಾರ ಉತ್ತರಿಸಬೇಕಿದೆ.