ಬೆಂಗಳೂರು: ದೊಡ್ಡಬಳ್ಳಾಪುರದಲ್ಲಿ ಹಲ್ಲೆ ನಡೆಸಿ, ಹತ್ಯೆ ಯತ್ನ ನಡೆದಿದೆ ಎಂದು ಖಾಸಗಿ ಚಾನಲ್‌ಗಳ ಮುಂದೆ ಆರೋಪಿಸುತ್ತಲೇ ಇದ್ದ ಬಿಗ್ ಬಾಸ್ ವಿಜೇತ ಪ್ರಥಮ್ (Pratham), ದೊಡ್ಡಬಳ್ಳಾಪುರ ಹಾಗೂ ಪೊಲೀಸ್ ಇಲಾಖೆಯ ಗೌರವಕ್ಕೆ ದಕ್ಕೆ ಎಂದು ಕನ್ನಡಿಗರ ರಕ್ಷಣಾ ವೇದಿಕೆ ದೂರಿನ ಬೆನ್ನಲ್ಲೇ ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ದೌಡಾಯಿಸಿದ ಪ್ರಥಮ್, ಘಟನೆ ನಡೆದು 7 ದಿನಗಳ ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರಿನಲ್ಲಿ ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಗಲಾಟೆ ಮಾಡಿ ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಪ್ರಥಮ್ ಉಲ್ಲೇಖ ಮಾಡಿದ್ದಾರೆ.
ಜುಲೈ. 22 ರಂದು ಮಹೇಶ್ ಎಂಬ ಸಿನಿಮಾ ಪ್ರೊಮೋಟರ್‌ರವರು ನನಗೆ ದೊಡ್ಡಬಳ್ಳಾಪುರದ ಎಲ್ಲಮ್ಮ ದೇವಸ್ಥಾನದ ಪೂಜೆಗೆ ಕರೆದಿದ್ದು ಪೂಜೆ ಮುಗಿಸಿ ಸುಮಾರು 15.50 ಗಂಟೆಗೆ ನಾನು ವಾಪಸ್ಸು ಬರುವ ವೇಳೆ, ಯಶಸ್ವಿನಿ ಮತ್ತು ಬೇಕರಿ ರಘು ಹಾಗೂ ಒಂದಷ್ಟು ಅಪರಿಚಿತರು ಕಾರನ್ನು ಸುತ್ತುವರೆದು ಅಜ್ಞಾತ ಸ್ಥಳಕ್ಕೆ ಕರೆದೊಯ್ದರು(ಗ್ರಾಮದ ಹೆಸರು ತಿಳಿದಿರುವುದಿಲ್ಲ ಸ್ಥಳವನ್ನು ಗುರ್ತಿಸುತ್ತೇನೆ).
ಈ ವೇಳೆ ದರ್ಶನ್‌ರವರನ್ನು ಕುರಿತು ನನ್ನ ಬಾಸ್ ಬಗ್ಗೆ ಮಾತನಾಡಿದ್ದೀಯ ಅಂತ ಅವಾಚ್ಯ ಶಬ್ದಗಳಿಂದ ಬೈಯ್ಯು. ಅವರುಗಳ ಬಳಿ ಇದ್ದ ಡ್ರಾಗರ್ ಮತ್ತು ಚಾಕು ತೋರಿಸಿ ಚುಚ್ಚಲು ಮುಂದಾಗಿ ಭಯಪಡಿಸಿರುತ್ತಾರೆ. ಇವರು ನನ್ನ ಬಳಿ ಗಲಾಟೆ ಮಾಡುವಾಗ್ಗೆ ಜೈಲಿನಲ್ಲಿ ದರ್ಶನ್ ಜೊತೆ ಇದ್ದ ಬ್ಯಾರಕ್ ಫೋಟೋವನ್ನು ತೋರಿಸಿರುತ್ತಾರೆ.
ಆ ನಂತರ ಅಲ್ಲಿಂದ ಬಹಳ ಉಪಾಯದಿಂದ ಪ್ರಾಣವನ್ನು ಉಳಿಸಿಕೊಂಡು ಬಂದಿದ್ದೆ ದೊಡ್ಡ ವಿಚಾರವಾಗಿರುತ್ತದೆ. ಈ ವಿಚಾರವನ್ನು ನನ್ನ ಜೊತೆ ಇದ್ದ ನನ್ನ ಸ್ನೇಹಿತರಾದ ಮಹೇಶ್, ಪ್ರಮೋದ್, ಚಾಲಕ ಪ್ರಕಾಶ್ ಸಾಕ್ಷಿಯಾಗಿರುತ್ತಾರೆ.
ಆದ್ದರಿಂದ ಮೇಲ್ಕಂಡವರಿಂದ ನನಗೆ ಜೀವ ಭಯವಿರುವುದರಿಂದ ನನಗೆ ರಕ್ಷಣೆ ನೀಡಿ ಕಾನೂನು ಅಡಿಯಲ್ಲಿ ಅವರ ಮೇಲೆ ಕ್ರಮ ಜರುಗಿಸಬೇಕೆಂದು ಈ ಮೂಲಕ ಕೋರುತ್ತೇನೆ.
ನಾನು ಒಂದು ವಾರದಿಂದ ನನಗೆ ತೊಂದರೆ ಮಾಡಿದ್ದವರ ಬಗ್ಗೆ ಬುದ್ದಿ ಹೇಳಿಸಿ ರಾಜಿ ಆಗಲು ದರ್ಶನ್ ಆಪ್ತರು ಪ್ರಯತ್ನಿಸಿರುತ್ತಾರೆ. ಆದರೆ ಜುಲೈ. 28ರಿಂದ ಇಲ್ಲಿಯವರೆಗೂ ದರ್ಶನ್‌ರವರ ಅಧಿಕೃತ ಫ್ಯಾನ್ ಪೇಜಾದ ಡಿ ಡೈನಾಸ್ಟಿ, ಡಿ ಕಿಂಗ್‌ಡಮ್, ಡಿ ಯೂನಿವರ್ಸ್ ಮತ್ತು ಡೆವಿಲ್ ಕಿಂಗ್‌ಡಮ್ ಜೊತೆಗೆ 500 ಕ್ಕೂ ಹೆಚ್ಚು ಪೇಜ್‌ಗಳಿಂದ ನನ್ನ ವಯಕ್ತಿಕ ತೇಜೋವಧೆಗೆ ಇಳಿದಿರುತ್ತಾರೆ. ಆದ್ದರಿಂದ ಇವರುಗಳ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಬರೆದಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ದರ್ಶನ್ ಅವರ ಕುರಿತು ಪರೋಕ್ಷವಾಗಿ ಬೇಕಾಬಿಟ್ಟಿ ಮಾತನಾಡಿದ್ದಲ್ಲದೆ, ಸ್ಥಳಕ್ಕೆ ದರ್ಶನ್ ಬರಬೇಕು, ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗೆ ಅವಹೇಳನ ಮಾಡದಂತೆ ಬುದ್ದಿ ಹೇಳಿ ಪೋಸ್ಟ್ ಮಾಡಬೇಕು, ಅಲ್ಲಿವರೆಗೂ ಅಮರಣಾಂತ ಉಪವಾಸ ಮಾಡುವೆ ಎಂದು ಹೇಳಿದವರು, ಯಾವುದೇ ಉಪವಾಸ ಸತ್ಯಾಗ್ರಹವನ್ನು ಮಾಡುವಂತೆ ಸ್ವಲ್ಪ ಸಮಯ ಕೂತು, ಮಾಧ್ಯಮಗಳಿಂದ ಪೋಟೋ, ವಿಡಿಯೋ ಆದ ಬಳಿಕ ಸ್ಥಳದಿಂದ ಕಾಲ್ಕಿತ್ತಿದ್ದಾರೆಂದು ವರದಿಯಾಗಿದೆ.