ಬೆಂಗಳೂರು: ಅತ್ಯಾಚಾರ ಪ್ರಕರಣ ಸಂಬಂಧ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ (Prajwal Revanna) ಜೀವಿತಾವಧಿಯ ಶಿಕ್ಷೆಯ ತೀರ್ಪು ಹೊರಬಿದ್ದಿದ್ದು, ಇನ್ನೂ 3 ಪ್ರಮುಖ ಪ್ರಕರಣ ಬಾಕಿ ಇದೆ.
ಇವುಗಳಲ್ಲಿ ಮೂರನೇ ಪ್ರಕರಣದ ವಿಚಾರಣೆಯೂ ಆರಂಭವಾಗಿದೆ. ಈಗ ಆದೇಶ ಹೊರಬಿದ್ದಿರುವುದು ಎರಡನೇ ಪ್ರಕರಣದ್ದು, ಹೀಗಿದ್ದರೂ ಕೊನೆಯುಸಿರು ಇರುವ ತನಕ ಪ್ರಜ್ವಲ್ ಹೊರಗೆ ಬರುವಂತಿಲ್ಲ ಎಂದು ತನಿಖೆಯ ಹೊಣೆ ಹೊತ್ತ ಎಸ್‌ಐಟಿ ಹೇಳಿದೆ.
ನ್ಯಾಯಾಧೀಶರಾದ ಸಂತೋಷ್ ಗಜಾನನ್ ಭಟ್ ಅವರ ಪೀಠದಿಂದ ಮತ್ತೊಂದು ಪ್ರಕರಣದ ವಿಚಾರಣೆ ಆರಂಭವಾಗಿದ್ದು, ಇದೂ ಕೂಡ ಅತ್ಯಾಚಾರ ಪ್ರಕರಣದ್ದಾಗಿದೆ. ಹಾಸನ ಮೂಲದ ಸಂತ್ರಸ್ತೆ ಕೂಡ ನ್ಯಾಯಾಲಯದಲ್ಲಿ ಹಾಜರಾಗಿದ್ದಾರೆ.
ತನಿಖೆಯ ಹೊಣೆ ಹೊತ್ತ ಎಸ್‌ಐಟಿ ತಂಡ ಐದು ಪ್ರಕರಣದ ತನಿಖೆ ನಡೆಸಿದೆ. ಈಗ ನಾಲ್ಕು ಕೇಸ್‌ಗಳಲ್ಲಿ ಒಂದು ಪ್ರಕರಣದ ವಿಚಾರಣೆ ನಡೆದು ಜನಪ್ರತಿನಿಧಿಗಳ ನ್ಯಾಯಾಲಯ ತೀರ್ಪು ನೀಡಿದೆ. ಇದರ ಬೆನ್ನಲ್ಲೇ ಪ್ರಜ್ವಲ್ ರೇವಣ್ಣ ಮತ್ತೊಂದು ಪ್ರಕರಣದ ವಿಚಾರಣೆ ಎದುರಿಸಬೇಕಾಗಿದೆ.
ಮೊಬೈಲೇ ಮುಳುವು: ಸ್ವಯಂಕೃತ ಅಪರಾಧ: ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್‌ಗೆ ಶಿಕ್ಷೆ ಪ್ರಕಟವಾಗಿರುವುದು ತಾನು ಮಾಡಿಕೊಂಡ ಸ್ವಯಂಕೃತ ಅಪರಾಧದಿಂದಲೇ. ಅಪರಾಧಿಗೆ ತನ್ನ ಮೊಬೈಲೇ ಮುಳುವಾಗಿ ಕಾಡಿದ್ದಲ್ಲದೆ, ಸಂತ್ರಸ್ತೆ ಬಟ್ಟೆ ಮೇಲೆ ಪ್ರಜ್ವಲ್ ವೀರ್ಯದ ಕಲೆಯೂ ಪ್ರಮುಖ ಸಾಕ್ಷಿಯಾಗಿ ಪರಿಗಣಿಸಲಾಗಿದೆ.
ಎಸ್‌ಐಟಿ ತನಿಖೆ ವೇಳೆ ಅತ್ಯಾಚಾರ ನಡೆದಿರೋದು ದೃಢವಾಗಿತ್ತು. ಅತ್ಯಾಚಾರಕ್ಕೆ ಒಳಗಾಗಿದ್ದ ಸಂತ್ರಸ್ತೆಯ ಒಳ ಉಡುಪಿನಲ್ಲಿ ಪ್ರಜ್ವಲ್ ವೀರ್ಯದ ಕಲೆ ಇದು, ಅದು ಆತನದ್ದೇ ಎನ್ನುವುದು ದೃಢವಾಗಿತ್ತು. ಅಲ್ಲದೇ ಸಂತ್ರಸ್ತ ಕೂಡ ಆತನೇ ಬೆದರಿಸಿ ಅತ್ಯಾಚಾರ ಮಾಡಿದ್ದಾಗಿ ಹೇಳಿದ್ದಳು. ಇದಲ್ಲದೆ ತಾಂತ್ರಿಕವಾಗಿ ಮುಳುವಾಗಿದ್ದೇ ಆತನ ಮೊಬೈಲ್ ವಿಡಿಯೊಗಳು. ತಾನೇ ಸೆರೆ ಹಿಡಿದ ಲೈಂಗಿಕ ದೌರ್ಜನ್ಯದ ವಿಡಿಯೊಗಳಿಂದಲೇ ಪ್ರಜ್ವಲ್ ರೇವಣ್ಣ ಶಿಕ್ಷೆಗೆ ಒಳಗಾಗುವಂತಾಗಿದೆ. ಇದಕ್ಕೆ ಪೂರಕವಾಗಿ ತನ್ನದಲ್ಲ ಎಂದು ವಾದ ಮಂಡನೆಯಾಗಿದ್ದರೂ, ವಿಧಿವಿಜ್ಞಾನ ಪ್ರಯೋಗಾಲಯ (ಎಫ್‌ಎಸ್ಎಲ್) ಪರೀಕ್ಷೆಯಲ್ಲಿ ವಿಡಿಯೊ ದೃಢಪಟ್ಟಿತ್ತು.
ಕೊನೆಯುಸಿರು ಇರುವ ತನಕ ಅಪರಾಧಿ ಹೊರಗಿಲ್ಲ
ಐದು ಪ್ರಕರಣದ ತನಿಖೆ ಪೂರ್ಣಗೊಂಡಿದೆ, ಚಾರ್ಜ್ ಶೀಟ್ ಆಗಿದೆ. ಇದರ ಆಧಾರದಲ್ಲಿ ಕೊನೆಯುಸಿರು ಇರುವ ತನಕ ಅಪರಾಧಿ ಹೊರಗೆ ಬರುವಂತಿಲ್ಲ ಎಂದು ಎಸ್‌ಐಟಿ ಮುಖ್ಯಸ್ಥ ಬಿಜಯ್ ಕುಮಾರ್ ಸಿಂಗ್ ಹೇಳಿದ್ದಾರೆ.
ಸಿಐಡಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂತ್ರಸ್ತೆ ಸಾಮಾಜಿಕವಾಗಿ ಕೆಳಸ್ಥಾನದಲ್ಲಿ ಇದ್ದರು. ಆರೋಪಿ ಸಮಾಜದಲ್ಲಿ ಪ್ರಭಾವಿ ವ್ಯಕ್ತಿಯಾಗಿದ್ದನು. ನ್ಯಾಯ ಬೇಕು ಅಂತ ಸಂತ್ರಸ್ಥೆ ನಮ್ಮ ಜತೆ ನಿಂತು ಇಂತ ತೀರ್ಪಿಗೆ ಕಾರಣಭೂತರಾಗಿದ್ದಾರೆ ಎಂದು ಪ್ರಶಂಶಿಸಿದರು.
ತನಿಖೆ ಆಧಾರದಂತೆ ಪ್ರಕರಣದಲ್ಲಿ ಎಲ್ಲಾ ಶಿಕ್ಷೆಗಳು ಕಠಿಣ ಶಿಕ್ಷೆಯಾಗಲಿವೆ. ನಮಗೆ ಒತ್ತಡ ಇತ್ತು ಎಂದು ಹೇಳಲ್ಲ, ಸವಾಲುಗಳು ಇದ್ದವು. 4 ವರ್ಷ ನಂತರ ಕೇಸ್ ನಮಗೆ ಬಂದಿತ್ತು. ವೈಜ್ಞಾನಿಕವಾಗಿ ಸಾಕ್ಷಿಗಳನ್ನು ಸಂಗ್ರಹಿಸಿದ್ದೇವೆ. ಬಳಿಕ ಸರಿಯಾದ ಕ್ರಮದಲ್ಲಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದೆವು.
ಪೆನ್ ಡ್ರೈವ್, ವಿಡಿಯೊ ಹರಿಬಿಟ್ಟವರ ಬಗ್ಗೆ ಪ್ರತ್ಯೇಕ ಕೇಸ್ ಆಗಿದೆ. ಅದು ಕೂಡ ಗೊತ್ತಾಗಿದೆ, ಚಾರ್ಜ್‌ಶೀಟ್ ಆಗುತ್ತದೆ ಎಂದರು. ಸಾಮಾಜಿಕವಾಗಿ, ಆರ್ಥಿಕವಾಗಿ ಕೆಳಗೆ ಇರುವ ಮಹಿಳೆ ಮೇಲೆ ಎಲ್ಲ ರೀತಿಯಿಂದಲೂ ಪ್ರಬಲರಾಗಿದ್ದ ಪ್ರಜ್ವಲ್ ರೇವಣ್ಣ ಅವರು ಅನ್ಯಾಯ ಎಸಗಿದ್ದರು.
ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಹಾಸನದಲ್ಲಿ ಪೆನ್‌ಡ್ರೈವ್‌ಗಳನ್ನು ಹಂಚಿಕೆ ಮಾಡಲಾಗಿತ್ತು. ಇದರಲ್ಲಿ ಬಹಳ ಮಹಿಳೆಯರ ಅಶ್ಲೀಲ ವಿಡಿಯೊಗಳು ಇದ್ದವು. ಒಟ್ಟು ಆರು ಪ್ರಕರಣಗಳು ದಾಖಲಾಗಿದ್ದವು. ಹೀಗಾಗಿ ರಾಜ್ಯ ಸರಕಾರ ಎಸ್‌ಐಟಿ ಅನ್ನು ರಚನೆ ಮಾಡಿತ್ತು. ಇದರಲ್ಲಿ ನಾನು, ಸೀಮಾ ಹಾಗೂ ಸುಮಾನ್ ಅವರು ಇದ್ದರು.
4 ಜನ ಸಂತ್ರಸ್ತರು ಮುಂದೆ ಬಂದು ದೂರು ದಾಖಲು ಮಾಡಿದ್ದರು. ಇದರಲ್ಲಿ ಒಂದು ಹೊಳೆನರಸೀಪುರ, ಕೆ.ಆರ್. ನಗರ, ಹಾಸನದಲ್ಲಿ ಸೇರಿ ಒಟ್ಟು 6 ಪ್ರಕರಣಗಳು ನಾವು ತೆಗೆದುಕೊಂಡಿದ್ದೆವು. ಕಳೆದ ವರ್ಷ ಡಿಸೆಂಬರ್ 31 ರಂದು ನಮಗೆ ಪ್ರಕರಣಗಳನ್ನು ಒಪ್ಪಿಸಲಾಗಿತ್ತು.
ಜ.3 ರಿಂದ ಒಂದು ಕೇಸ್ ನಿಂದ ಟ್ರಯಲ್ ಪ್ರಾರಂಭವಾಯಿತು. ಪ್ರಜ್ವಲ್‌ಗೆ ಕಠಿಣ ಶಿಕ್ಷೆಯನ್ನು ಕೋರ್ಟ್ ವಿಧಿಸಿದೆ. ಆಗಸ್ಟ್ 2 ಅಂದರೆ ಇಲ್ಲಿವರೆಗೆ 1 ವರ್ಷ 4 ತಿಂಗಳ ನಂತರ ಕೋರ್ಟ್ ತೀರ್ಪು ಬಂದಿದೆ ಎಂದರು.