ಹಿರಿಯೂರು: ಕಾಂಗ್ರೆಸ್ ನಲ್ಲಿ ಆಂತರಿಕ ಕಚ್ಚಾಟ ಈಗಾಗಲೇ ಬೀದಿಗೆ ಬಂದು ಜಗಜ್ಜಾಹೀರಾಗಿದೆ!. ಸಿಎಂ, ಡಿಸಿಎಂ ನಡುವಿನ ಮುನಿಸು ಅನೇಕ ಸಾರ್ವಜನಿಕ ಸಭೆಗಳಲ್ಲಿ ಸಾಬೀತಾಗಿದೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರು ವಾಗ್ದಾಳಿ ನಡೆಸಿದರು.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ವಿಧಾನಸಭಾ ಕ್ಷೇತ್ರದ ಹರಿಯಬ್ಬೆ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ಜನರೊಂದಿಗೆ ಜನತಾದಳ-ಜೆಡಿಎಸ್ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಡಿ.ಕೆ ಶಿವಕುಮಾರ್ ಅವರನ್ನ ಹೊರಗಿಟ್ಟು ಕಾಂಗ್ರೆಸ್ ಶಾಸಕರ ಸರಣಿ ಸಭೆ ವಿಚಾರಕ್ಕೆ ಪ್ರತಿಕ್ರಿಯೆಸಿದ ಅವರು; ಇದು ಅವರ ಪಕ್ಷಕ್ಕೆ ಬಿಟ್ಟ ತೀರ್ಮಾನ. ಯಾರನ್ನ ಸಭೆಗೆ ಆಹ್ವಾನ ಮಾಡಬೇಕು, ಯಾರನ್ನ ಕೈ ಬಿಡಬೇಕು ಇದು ಅವರ ಪಕ್ಷಕ್ಕೆ ಬಿಟ್ಟ ವಿಚಾರ ಹೇಳಿದರು.
ಕಾಂಗ್ರೆಸ್ ನಾಯಕರು ಹಲವಾರು ಜಿಲ್ಲೆಗಳಲ್ಲಿ ಸಾವಿರಾರು ಕೋಟಿ ಯೋಜನೆ ಘೋಷಿಸುತ್ತಿದ್ದಾರೆ. ಅಭಿವೃದ್ಧಿ ಏನೇನು ಮಾಡಿದ್ದಾರೆ ರಾಜ್ಯ ಸರ್ಕಾರ ಶ್ವೇತ ಪತ್ರ ಹೊರಡಿಸಲಿ. 224 ಕ್ಷೇತ್ರಗಳಲ್ಲೂ ಜೆಡಿಎಸ್ ಪಕ್ಷ ಸಂಘಟನೆ ಮಾಡುತ್ತಿದ್ದೇವೆ. ಪಕ್ಷ ಎಲ್ಲೆಲ್ಲಿ ಸಬಲವಾಗಿದೆ ರಿಪೋರ್ಟ್ ಕಾರ್ಡ್ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ರಾಜ್ಯದ ಅಭಿವೃದ್ಧಿಯನ್ನು ಸಂಪೂರ್ಣ ಕಡೆಗಣನೆ
ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಹೆಸರಲ್ಲಿ ರಾಜ್ಯದ ಅಭಿವೃದ್ಧಿಯನ್ನು ಸಂಪೂರ್ಣ ಕಡೆಗಣಿಸಿದೆ. ಜನರಿಗೆ ಗ್ಯಾರಂಟಿ ಯೋಜನೆಗಳನ್ನು ಕೊಡುವುದು ತಪ್ಪಿಲ್ಲ. ಆದರೆ, ಎಲ್ಲೊ ಒಂದು ಕಡೆ ಗ್ಯಾರಂಟಿ ಯೋಜನೆ ಕೊಡುವ ನೆಪದಲ್ಲಿ ಅಭಿವೃದ್ಧಿ ಕಾರ್ಯವನ್ನು ಮರೆತಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು.
ಭದ್ರಾ ಮೇಲ್ದಂಡೆ ಯೋಜನೆ ಪರಿಸ್ಥಿತಿ ಏನಾಗಿದೆ.?
ಕುಮಾರಣ್ಣನವರು ಮೊದಲ ಬಾರಿಗೆ ಈ ರಾಜ್ಯದ ಮುಖ್ಯಮಂತ್ರಿಯಾದ ಜಿಲ್ಲೆಯ ಹಾಗೂ ತಾಲ್ಲೂಕಿನ ರೈತರಿಗೆ ವಿಶೇಷವಾಗಿ ಭದ್ರಾ ಮೇಲ್ದಂಡೆ ಯೋಜನೆಗೆ ಶಂಕು ಸ್ಥಾಪನೆ ಮಾಡಿ ನೂರಾರು ಕೋಟಿ ಅನುದಾನವನ್ನು ತಂದಿದ್ದರು. ಈಗ ಅದರ ಪರಿಸ್ಥಿತಿ ಏನಾಗಿದೆ.? ಎಂದು ಕಿಡಿ ಕಾರಿದರು.
ಸಂಪೂರ್ಣವಾಗಿ ಜಿಲ್ಲೆಯ ರೈತರು ಕಷ್ಟ ಜೀವಿಗಳು, ಸ್ವಾಭಿಮಾನಿಗಳು. ನಿಮ್ಮ ಹೊಲ ಗದ್ದೆಗಳಿಗೆ ನೀರು ಹರಿಸುವುದಕ್ಕೆ ಮುಂದೆ ಬಂದ ಸರ್ಕಾರ ನಿಮಗೆ ಯಾವ ರೀತಿ ಸಹಕಾರ ಕೊಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎರಡು ರಾಷ್ಟ್ರೀಯ ಪಕ್ಷಗಳಿಗೆ ಮೀರಿದ ಅಭಿಮಾನಿ ಮತ್ತು ಕಾರ್ಯಕರ್ತರ ಪಡೆ ಕರ್ನಾಟಕದಲ್ಲಿ ಯಾವುದಾದರು ಇದ್ರೆ ಅದು ಜಾತ್ಯತೀತ ಜನತಾದಳ ಪಕ್ಷ. ನೀವು ಬೆಳೆಸಿದಂತ ಪ್ರಾದೇಶಿಕ ಪಕ್ಷ ಎಂದು ಸಾಬೀತು ಮಾಡಿದ್ದಾರೆ.
ಸರ್ಕಾರಕ್ಕೆ ರೈತರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ
ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ. ಒಂದು ಮೂಟೆ ರಸಗೊಬ್ಬರವನ್ನು ರೈತರಿಗೆ ಕೊಡಲು ಆಗುತ್ತಿಲ್ಲ. ಅಷ್ಟೇ ಅಲ್ಲ 20 ಸಾವಿರ ಇದ್ದಂತಹ ಟಿ.ಸಿ ಕನೆಕ್ಷನ್ ಗೆ ಮೂರು ಲಕ್ಷ ಮಾಡಿದ್ದಾರೆ. ಕಾಂಗ್ರೆಸ್ ನ ಆಡಳಿತದಲ್ಲಿ ರಾಜ್ಯದ ರೈತರು ಸಂಕಷ್ಟದಲ್ಲಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಗ್ರಾಮ ಪಂಚಾಯಿತಿ ರಾಜಕಾರಣದ ಬೇರು ಇದ್ದಂತೆ. ಕಾರ್ಯಕರ್ತರು ಪಕ್ಷದ ಉಳಿವಿಗಾಗಿ ಶ್ರಮಿಸುತ್ತಿದ್ದಾರೆ. ಅವರಿಗೆ ಬಲ ತುಂಬುವಂತಹ ಕೆಲಸ ಮಾಡುತ್ತಿದ್ದೇನೆ, ನಿಮ್ಮ ಸಂಘಟನೆ ನೀವು ಮಾಡಿ, ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲವರ್ಧನೆ ಮಾಡಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಪ್ರಜ್ವಲ್ ರೇವಣ್ಣಗೆ ಶಿಕ್ಷೆ ಪ್ರಕಟ ಜೆಡಿಎಸ್ ಪಕ್ಷಕ್ಕೆ ಡ್ಯಾಮೇಜ್ ಆಗುತ್ತಾ.? ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ನಿಖಿಲ್ ಕುಮಾರಸ್ವಾಮಿ ಅವರು ನ್ಯಾಯಾಲಯ ನ್ಯಾಯಾಧೀಶರ ತೀರ್ಪಿಗೆ ಎಲ್ಲರೂ ತಲೆಬಾಗಬೇಕು ಎಂದು ಹೇಳಿದರು.