ಬೆಂಗಳೂರು: ವಿಧಾನಸಭೆ ಮುಂಗಾರು ಅಧಿವೇಶನ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಜೆಡಿಎಸ್ ಮತ್ತು ಬಿಜೆಪಿ (NDA) ಮೈತ್ರಿಕೂಟದ ಸಮನ್ವಯ ಸಭೆ ನಡೆಸಲಾಯಿತು.
ಪ್ರಮುಖವಾಗಿ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಟ ನಡೆಸುವ ಬಗ್ಗೆ ಸಭೆಯಲ್ಲಿ ಸುಮಾರು ಒಂದು ಗಂಟೆಗಳ ಸಮಾಲೋಚನೆ ನಡೆಸಲಾಯಿತು.
ಸಭೆಯ ನಂತರ ಮಾಧ್ಯಮಗಳ ಜತೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಅವರು; ಸುದೀರ್ಘ ಒಂದು ಗಂಟೆ ಕಾಲ ನಡೆದ ಸಭೆಯಲ್ಲಿ ಅನೇಕ ವಿಚಾರಗಳ ಬಗ್ಗೆ ಚರ್ಚಿಸಿದ್ದೇವೆ. ಸರ್ಕಾರ ಎರಡು ವರ್ಷಗಳಲ್ಲಿ ಭ್ರಷ್ಟಾಚಾರ, ದುರಾಡಳಿತ ಮಾಡ್ತಿದೆ. ಯಾವ ವಿಚಾರ ಚರ್ಚಿಸಬೇಕು ಎಂದು ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದರು.
ನವದೆಹಲಿಯಲ್ಲಿ ಸಂಸತ್ ಕಲಾಪ ನಡೆಯುತ್ತಿರುವ ಕಾರಣ ಕುಮಾರಣ್ಣ ಅವರು ಈ ಸಭೆಗೆ ಬಂದಿಲ್ಲ. ನಾಳೆಯಿಂದ ನಡೆಯಲಿರುವ ವಿಧಾನಮಂಡಲದ ಮುಂಗಾರು ಅಧಿವೇಶದಲ್ಲಿ ಸರ್ಕಾರಕ್ಕೆ ಹಲವಾರು ಪ್ರಶ್ನೆ ಇಡುತ್ತೇವೆ. ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸ್ತೇವೆ ಎಂದು ಹೇಳಿದರು.
ನಂತರ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಮಾತನಾಡಿ; ರೈತರಿಗೆ ರಸಗೊಬ್ಬರ ವಿತರಣೆ ಮಾಡಿಲ್ಲ. ಎಲ್ಲದಕ್ಕೂ ಕೇಂದ್ರ ಸರ್ಕಾರಕ್ಕೆ ಬೊಟ್ಟು ಮಾಡ್ತಾರೆ. ಅಧಿವೇಶನದಲ್ಲಿ ಬೆಲೆ ಏರಿಕೆ, ಕಾಲ್ತುಳಿತ ಎಲ್ಲವನ್ನ ಚರ್ಚೆ ಮಾಡ್ತೇವೆ ಎಂದು ಹೇಳಿದರು.
ಶಾಸಕರ ಅನುದಾನದಲ್ಲೂ ತಾರತಮ್ಯ ಆಗಿದೆ. ಎಲ್ಲ ಇಲಾಖೆಗೂ ಅನುದಾನ ಕೊಟ್ಟಿಲ್ಲ. ಎಲ್ಲ ವಿಚಾರಗಳ ಬಗ್ಗೆ, ಸರ್ಕಾರದ ಲೋಪದೋಷದ ಬಗ್ಗೆ ಚರ್ಚೆ ಮಾಡ್ತೇವೆ. ಯುವನಿಧಿಗೆ 2.80 ಲಕ್ಷ ಜನ ಮಾತ್ರ ಅರ್ಜಿ ಹಾಕಿದಾರೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಸಭೆಯಲ್ಲಿ ಪ್ರತಿಪಕ್ಷ ನಾಯಕ ಆರ್. ಅಶೋಕ್, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಸುರೇಶ್ ಬಾಬು, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ , ಅಶ್ವಥ್ ನಾರಾಯಣ್, ಛಲವಾದಿ ನಾರಾಯಣ ಸ್ವಾಮಿ, ತಿಪ್ಪೇಸ್ವಾಮಿ, ಮಾಜಿ ಸಚಿವರಾದ ಸಿ.ಟಿ ರವಿ, ಸುನೀಲ್ ಕುಮಾರ್ ಕಾರ್ಕಳ ಅವರು, ಶಾಸಕರುಗಳಾದ ಎಂ.ಟಿ ಕೃಷ್ಣಪ್ಪ ಅವರು, ಶಾರದಾ ಪೂರ್ಯ ನಾಯಕ್ ಅವರು, ಜಿ.ಡಿ.ಹರೀಶ್ ಗೌಡ, ಶರಣ್ ಗೌಡ ಕಂದಕೂರ, ವಿಧಾನ ಪರಿಷತ್ ಸದಸ್ಯರಾದ ಟಿ ಎನ್ ಜವರಾಯಿಗೌಡ, ರವಿಕುಮಾರ್ ಸೇರಿ ಮೈತ್ರಿ ಪಕ್ಷಗಳ ಪ್ರಮುಖರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಉಪಸ್ಥಿತರಿದ್ದರು.