ಬೆಂಗಳೂರು: ಮತ ಕಳ್ಳತನ (Vote Chori) ದಾಖಲೆ ಬಿಡುಗಡೆ ಮಾಡಿ, ಚುನಾವಣೆ ಆಯೋಗದ ವಿರುದ್ಧ ಗಂಭೀರ ಆರೋಪ ಮಾಡಿರುವ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಅವರಿಗೆ ಕರ್ನಾಟಕ ರಾಜ್ಯ ಚುನಾವಣಾ ಆಯೋಗ ನೋಟಿಸ್ ಕೊಟ್ಟಿದೆ.
ಅಚ್ಚರಿಯ ಬೆಳವಣಿಗೆಯಲ್ಲಿ ನಾಳೆ (ಸೋಮವಾರ) ಕೇಂದ್ರ ಚುನಾವಣೆ ಆಯೋಗಕ್ಕೆ ರಾಹುಲ್ ಗಾಂಧಿ (Rahul Gandhi) ದೂರು ಸಲ್ಲಿಸುವ ಮುನ್ನವೇ, ರಜಾ ದಿನವಾದ ಇಂದು (ಭಾನುವಾರ) ಸಂಜೆಯೇ ರಾಜ್ಯ ಚುನಾವಣಾ ಆಯೋಗ ನೋಟಿಸ್ ಕೊಟ್ಟಿದೆ.
ಇದರ ಅನ್ವಯ ನೀವು (ರಾಹುಲ್ ಗಾಂಧಿ) ಪತ್ರಿಕಾಗೋಷ್ಠಿಯನ್ನ ನಡೆಸಿ ಆರೋಪಗಳನ್ನ ಮಾಡಿದ್ದೀರಿ. ಈ ಆರೋಪಗಳಿಗೆ ಸಂಬಂಧಪಟ್ಟಂತೆ ವಿಚಾರಣೆ ಮಾಡಲು ದಾಖಲೆಗಳನ್ನ ಕೊಡಿ ಎಂದು ನೋಟಿಸ್‌ನಲ್ಲಿ ಕೇಳಿದೆ.
ಅಲ್ಲದೇ, ಪತ್ರಿಕಾಗೋಷ್ಠಿಯಲ್ಲಿ ತೋರಿಸಿರುವ ದಾಖಲೆಗಳು ಚುನಾವಣಾ ಆಯೋಗದಿಂದ ಡೇಟಾ ಎಂದು ಹೇಳಿದ್ದೀರಿ. ಅಲ್ಲದೇ, ಮತಗಟ್ಟೆ ಅಧಿಕಾರಿ ನೀಡಿದ ದಾಖಲೆಗಳ ಪ್ರಕಾರ, ಶಕುನ್ ರಾಣಿ ಎನ್ನುವವರು ಎರಡು ಬಾರಿ ಮತ ಹಾಕಿದ್ದಾರೆ ಎಂದು ಆರೋಪ ಮಾಡಿದ್ದೀರಿ. ಆದರೆ ನಾವು ಮಾಡಿದ ವಿಚಾರಣೆಯಲ್ಲಿ ಶಕುನ್ ರಾಣಿ ಅವರು ಎರಡು ಬಾರಿ ಅಲ್ಲ ಒಂದು ಬಾರಿ ಮಾತ್ರ ಮತ ಚಲಾಯಿಸಿದ್ದೇನೆ ಎಂದು ಹೇಳಿದ್ದಾರೆ ಎಂದು ನೋಟಿಸ್‌ನಲ್ಲಿ ಆಯೋಗ ತಿಳಿಸಿದೆ.
ನಿಮ್ಮ ಆರೋಪಗಳ ಬಗ್ಗೆ ಕಚೇರಿ ನಡೆಸಿದ ಪ್ರಾಥಮಿಕ ವಿಚಾರಣೆಯಲ್ಲಿ ನೀವು ಪತ್ರಿಕಾಗೋಷ್ಠಿಯಲ್ಲಿ ಟಿಕ್ ಮಾಡಿ ತೋರಿಸಿದ ದಾಖಲೆ ಮತಗಟ್ಟೆ ಅಧಿಕಾರಿ ನೀಡಿದ ದಾಖಲೆಯಲ್ಲ ಎಂದು ಆಯೋಗ ಹೇಳಿದೆ.
ಹಾಗಾಗಿ ಶಕುನ್ ರಾಣಿ ಅಥವಾ ಬೇರೆ ಯಾರಾದರೂ ಎರಡು ಬಾರಿ ಮತ ಹಾಕಿದ್ದಾರೆ ಎಂದು ನೀವು ತೀರ್ಮಾನ ಮಾಡಿರುವ ಸಂಬಂಧಿಸಿದ ದಾಖಲೆಗಳನ್ನ ಕೊಡಬೇಕು ಎಂದು ಮನವಿ ಮಾಡುತ್ತೇವೆ. ಇದರಿಂದ ಸರಿಯಾದ ವಿಚಾರಣೆ ಮಾಡಬಹುದು ಎಂದು ಆಯೋಗ ಹೇಳಿದೆ.