ದೊಡ್ಡಬಳ್ಳಾಪುರ: ಉತ್ತರಹಳ್ಳಿ ರಸ್ತೆಯಲ್ಲಿರುವ ಅಭಿಮಾನ್ ಸ್ಟುಡಿಯೋದಲ್ಲಿದ್ದ ಸಾಹಸಸಿಂಹ ಡಾ.ವಿಷ್ಣುವರ್ಧನ್ (Vishnuvardhan) ಸಮಾಧಿಯನ್ನು ರಾತ್ರೋ ರಾತ್ರಿ ಪೊಲೀಸ್ ಭದ್ರತೆಯಲ್ಲಿ ನೆಲಸಮ ಮಾಡಲಾಗಿದ್ದು, ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಈ ಕುರಿತಂತೆ ಡಾ.ವಿಷ್ಣುವರ್ಧನ್ ಸೇನಾ ಸಮಿತಿ ಮತ್ತು ವಿಷ್ಣುವರ್ಧನ್ ಅಭಿಮಾನಿಗಳ ಒಕ್ಕೂಟದ ವತಿಯಿಂದ ನಗರದ ಡಾ.ವಿಷ್ಣುವರ್ಧನ್ ಪ್ರತಿಮೆ ಮುಂಭಾಗದ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಮುಖಂಡರು, ಹಿರಿಯ ನಟ ದಿ.ಬಾಲಕೃಷ್ಣ ಅವರಿಗೆ ಸರ್ಕಾರ ಉಚಿತವಾಗಿ ನೀಡಿದ ಜಮೀನು ಇದಾಗಿದ್ದು, ಇಲ್ಲಿ ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆ ನಡೆಸಲಾಗಿದೆ. ಇದು ಅಭಿಮಾನಿಗಳ ಪೂಜನೀಯ ಸ್ಥಳವಾಗಿದೆ.
ಆದರೆ ಬಾಲಕೃಷ್ಣ ಅವರ ಕುಟುಂಬಸ್ಥರು ನ್ಯಾಯಾಲಯದ ಆದೇಶತಂದು ಯಾವುದೇ ಸೂಚನೆ ನೀಡದೆ ಸ್ಮಾರಕವನ್ನು ರಾತ್ರೋರಾತ್ರಿ ನೆಲಸಮಗೊಳಿಸಿರುವುದು ಖಂಡನೀಯ. ಈ ಕುರಿತಂತೆ ಅಭಿಮಾನಿಗಳ ಸಂಘಕ್ಕೆ ಅಥವಾ ಸರ್ಕಾರಕ್ಕೆ ಮಾಹಿತಿ ನೀಡಿ, ಬದಲಿ ಜಮೀನು ಅಥವಾ ಹಣವನ್ನು ಪಡೆಯಬಹುದಾಗಿತ್ತು. ಈ ವರ್ತನೆಯನ್ನು ಅಭಿಮಾನಿಗಳಿಗೆ ಸಹಿಸಲು ಅಸಾಧ್ಯವಾಗಿದೆ.
ಕೂಡಲೇ ರಾಜ್ಯ ಸರ್ಕಾರ ಮಧ್ಯಪ್ರವೇಶ ಮಾಡಿ, ಡಾ.ವಿಷ್ಣುವರ್ಧನ್ ಅವರ ಸ್ಮಾರಕ ಮರು ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕಿದೆ. ಸರ್ಕಾರವೇ ಉಚಿತವಾಗಿ ನೀಡಿರುವ ಜಮೀನನ್ನು ಮರು ವಶಕ್ಕೆ ಪಡೆಯ ಬೇಕು. ಆ ಮೂಲಕ ಡಾ.ವಿಷ್ಣುವರ್ಧನ್ ಸ್ಮಾರಕ ಕೆಡವಿದವರಿಗೆ ಪಾಠಕಲಿಸಬೇಕೆಂದು ಒತ್ತಾಯಿಸಿದರು.
ಡಾ.ರಾಜ್‌ಕುಮಾರ್ ಹಾಗೂ ಡಾ.ವಿಷ್ಣುವರ್ಧನ್ ಕನ್ನಡ ಚಿತ್ರರಂಗಕ್ಕೆ, ಕರ್ನಾಟಕಕ್ಕೆ ಎರಡು ಕಣ್ಣುಗಳು ಇದ್ದಂತೆ, ಒಂದು ಕಣ್ಣಿಗೆ ನ್ಯಾಯ ಮಾಡಿ, ಮತ್ತೊಂದು ಕಣ್ಣಿಗೆ ಅನ್ಯಾಯವಾದರೂ ನೋಡುತ್ತಾ ಇರುವುದು ಸರ್ಕಾರಕ್ಕೆ ಶೋಭೆತರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಬಾಲಕೃಷ್ಣ ಕುಟುಂಬ ಹಾಗೂ ರಾಜ್ಯ ಸರ್ಕಾರದ ವಿರುದ್ಧ ದಿಕ್ಕಾರ ಕೂಗಲಾಯಿತು.
ಪ್ರತಿಭಟನೆಯಲ್ಲಿ ಹಿರಿಯ ಕನ್ನಡಪರ ಹೋರಾಟಗಾರ, ನಗರಸಭೆ ಸದಸ್ಯ ತ.ನ.ಪ್ರಭುದೇವ್, ಆನಂದ್, ಅಭಿಮಾನಿಗಳಾದ ಭಾರ್ಗವ, ಅಗ್ನಿ ವೆಂಕಟೇಶ್, ಸೋಮಶೇಖರ್, ಶಿವಕುಮಾರ್, ರಾಮಾಂಜಿನಪ್ಪಾ, ಪಾಪಯ್ಯ, ಗೌರೀಶ್, ವಿಜಯ್ ಕುಮಾರ್, ಶಿವು ಬೊಂಬಾಟ್, ಶಶಿಕುಮಾರ್, ಲಚ್ಚಿ, ರವಿಕುಮಾರ್, ನಾಗೇಶ್, ಗಂಧಾರ್, ಶಂಕರ್, ನಾರಾಯಣಪ್ಪ, ಮಲ್ಲೇಶ್, ಮುನಿ ಆಂಜಿನಪ್ಪ ಮತ್ತಿತರರಿದ್ದರು.