ದೊಡ್ಡಬಳ್ಳಾಪುರ: ತಾಲೂಕು ಜೆಡಿಎಸ್ (JDS) ಪಕ್ಷದಲ್ಲಿ ಆಕ್ರೋಶ ಸ್ಪೋಟವಾಗಿದ್ದು, ಬಿ.ಮುನೇಗೌಡ (B.Mine Gowda), ಹುಸ್ಕೂರು ಆನಂದ್ (Huskur Anand) ಬೆಂಬಲಿಗರು ಇಂದು ಸಾಸಲು ಹೋಬಳಿ ಹೊಸಹಳ್ಳಿಯಲ್ಲಿ 500ಕ್ಕೂ ಹೆಚ್ಚು ಮಂದಿ ಕಾರ್ಯಕರ್ತರು ಸಭೆ ಸೇರಿ, ಪಕ್ಷದ ವರಿಷ್ಠರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಹೌದು ಬಿ.ಮುನೇಗೌಡ ಅವರನ್ನು ಜೆಡಿಎಸ್ ಅಧ್ಯಕ್ಷ ಸ್ಥಾನದಿಂದ ಏಕಾಏಕಿ ಕೆಳಗಿಳಿಸಿರುವ ಕುರಿತು ತೀವ್ರ ಆಘಾತಕ್ಕೆ ಒಳಗಾಗಿದ್ದ ಜೆಡಿಎಸ್ನ ಕಾರ್ಯಕರ್ತರು, ಇಂದು ಹೊಸಹಳ್ಳಿಯ ಸಮುದಾಯ ಭವನದಲ್ಲಿ ಹುಸ್ಕೂರು ಆನಂದ್ ಅವರ ನೇತೃತ್ವದಲ್ಲಿ ಸಭೆ ಸೇರಿದ್ದರು.
ದ್ವಿಚಕ್ರ ವಾಹನ, ಆಟೋ, ಕಾರು, ಟ್ರ್ಯಾಕ್ಟರ್ ಗಳ ಮೂಲಕ ಸಭೆಗೆ ಧಾವಿಸಿದ್ದ ಐನೂರಕ್ಕೂ ಹೆಚ್ಚು ಕಾರ್ಯಕರ್ತರು, ಜೆಡಿಎಸ್ ವರಿಷ್ಠರ ನಿಲುವಿನ ವಿರುದ್ಧ ಒಕ್ಕೊರಲಿನಿಂದ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಜೆಡಿಎಸ್ ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷರ ಆಯ್ಕೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಕಾರ್ಯಕರ್ತರು, ಮೇ.8 ರಂದು ನಿಖಿಲ್ ಕುಮಾರಸ್ವಾಮಿ ಅವರ ದೊಡ್ಡಬಳ್ಳಾಪುರದ ಕಾರ್ಯಕ್ರಮಕ್ಕೆ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ, ಜೆಡಿಎಸ್ ಹಿರಿಯ ಮುಖಂಡ ಹುಸ್ಕೂರು ಆನಂದ್, ಪಕ್ಷ ವಿರೋಧಿ ಚಟುವಟಿಕೆ ಮಾಡಿದವರೊಂದಿಗೆ ಸೇರಿಕೊಂಡು ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್ ನೂತನ ಅಧ್ಯಕ್ಷ ಮಂಜುನಾಥ್, ಅಧಿಕಾರ ನೀಡುವ ಮೂಲಕ ದೊಡ್ಡಬಳ್ಳಾಪುರ ತಾಲ್ಲೂಕಿನ ನಿಷ್ಠಾವಂತ ಜೆಡಿಎಸ್ ಕಾರ್ಯಕರ್ತರನ್ನು ನಿರಾಸೆಗೊಳಿಸಿದ್ದಾರೆ.
ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಕೃಷ್ಣಾರೆಡ್ಡಿ ಅವರಿಗೆ ದೊಡ್ಡಬಳ್ಳಾಪುರದ ವಾಸ್ತವ ಸ್ಥಿತಿಯನ್ನು ಮನವರಿಗೆ ಮಾಡಿದ್ದರು, ಪಕ್ಷ ವಿರೋಧಿ ಚಟುವಟಿಕೆ ಮಾಡಿದವರೊಂದಿಗೆ ಶಾಮೀಲಾಗಿ ದೊಡ್ಡಬಳ್ಳಾಪುರದಲ್ಲಿ ಜೆಡಿಎಸ್ ಪಕ್ಷವನ್ನು ಸರ್ವನಾಶ ಮಾಡಲು ಮುಂದಾಗಿದ್ದಾರೆ.
ಈ ಬೆಳವಣಿಗೆಯ ನಂತರವೂ ಬಿ.ಮುನೇಗೌಡ ಅವರೊಂದಿಗೆ ದೊಡ್ಡಬಳ್ಳಾಪುರ ತಾಲ್ಲೂಕಿನ ಜೆಡಿಎಸ್ ಬೆಂಬಲಿಗರು ಇರುವುದಕ್ಕೆ ಇಂದಿನ ಸಭೆ ಸಾಕ್ಷಿಯಾಗಿದೆ. ಈ ಕುರಿತು ಕಾದು ನೋಡುತ್ತಾ, ಪಕ್ಷ ಸಂಘಟನೆ ಮಾಡುತ್ತೇವೆ. ಬಳಿಕ ತಕ್ಕ ಉತ್ತರ ನೀಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಮೇ.8 ರಂದು ದೊಡ್ಡಬಳ್ಳಾಪುರಕ್ಕೆ ನಿಖಿಲ್ ಕುಮಾರಸ್ವಾಮಿ
ಮೇ.8 ರಂದು ಜೆಡಿಎಸ್ ಯುವ ಘಟಕದ ತಾಲೂಕು ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ಕಾರ್ಯಕ್ರಮ ದೊಡ್ಡಬಳ್ಳಾಪುರದಲ್ಲಿ ನಿಗದಿಯಾಗಿದೆ.
ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಜೆಡಿಎಸ್ ಪಕ್ಷದ ಸಂಘಟನೆ, ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾರ್ಯಕರ್ತರನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಜನರೊಂದಿಗೆ ಜನತಾದಳ ಕಾರ್ಯಕ್ರಮ ಆಯೋಜನೆಯಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮಂಜುನಾಥ್ ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕು ಜೆಡಿಎಸ್ ಅಧ್ಯಕ್ಷರಾಗಿ ಹರೀಶ್ ಗೌಡ ಆಯ್ಕೆಯಾದ ಬಳಿಕ ನಡೆಸಲಾಗುತ್ತಿರುವ ಮೊದಲ ಅದ್ಧೂರಿ ಕಾರ್ಯಕ್ರಮ ಇದಾಗಲಿದೆ.

