ಗ್ರೇಟರ್ ನೋಯ್ಡಾ: ಹತ್ರಾಸ್ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಂತ್ರಸ್ತೆಯ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಂತ್ವಾನ ಹೇಳಲು ಮುಂದಾಗಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಅವರನ್ನು ತಡೆಯಲು ಮುಂದಾದ ಉತ್ತರ ಪ್ರದೇಶ ಪೊಲೀಸರ ನಡುವೆ ತಳ್ಳಾಟ ನೂಕಾಟ ಸಂಭವಿಸಿ ರಾಹುಲ್ ಗಾಂಧಿ ಆಯತಪ್ಪಿ ಬಿದ್ದಿರುವ ಘಟನೆ ನೋಯ್ಡಾ ಬಳಿ ನಡೆದಿದೆ.
ಲಕ್ನೋ ಬಳಿಯ ಹತ್ರಾಸ್ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಂತ್ರಸ್ತೆಯ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಂತ್ವಾನ ಹೇಳಲು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ತೆರಾಲಿದ್ದರು. ವಿಷಯ ತಿಳಿದ ಪೊಲೀಸರು ಈ ಇಬ್ಬರನ್ನು ಗ್ರೇಟರ್ ನೋಯ್ಡಾ ಬಳಿಯೇ ತಡೆದ ಪೊಲೀಸರು ಬಳಿಕ ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ರಾಹುಲ್ ಗಾಂಧಿ, ಪೊಲೀಸರು ತಮ್ಮನ್ನು ತಳ್ಳಿ ಲಾಠಿ ಚಾರ್ಜ್ ಮಾಡಿದ್ದಾರೆ. ಸಾಮಾನ್ಯ ವ್ಯಕ್ತಿಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುವ ಹಕ್ಕು ದೇಶದಲ್ಲಿ ಇಲ್ಲವೇ. ಕೇವಲ ಆರ್.ಎಸ್.ಎಸ್, ವಿಎಚ್‍ಪಿ ನಾಯಕರು ಮತ್ತು ಮೋದಿ ಒಬ್ಬರೇ ರಸ್ತೆಯಲ್ಲಿ ಹೋಗಬೇಕೆ ಎಂದು ಪ್ರಶ್ನಿಸಿದರು.
ಮತ್ತೊಂದೆಡೆ ಉತ್ತರ ಪ್ರದೇಶದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ ಎಂದು ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ.
ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ನಾಯಕರನ್ನು ವಶಕ್ಕೆ ಪಡೆದ ಪೊಲೀಸರ ನಡೆಗೆ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದರೆ, ಸಾವಿನಮನೆಯಲ್ಲು ರಾಜಕೀಯ ಮಾಡಲು ತೆರಳಿ ರಾಹುಲ್ ಗಾಂಧಿ ಜಾರಿ ಬಿದ್ದಿದ್ದಾರೆಂದು ವಿರೋಧ ಪಕ್ಷಗಳು ಕಿಚಾಯಿಸಿವೆ.

