ದೊಡ್ಡಬಳ್ಳಾಪುರ: ಜಗತ್ತಿನ ಮೇರು ಪುರುಷಗಳಲ್ಲಿ ಒಬ್ಬರಾದ ಮಹಾತ್ಮ ಗಾಂಧೀಜಿ ನಮ್ಮೂರಿಗೆ ಬಂದಿದ್ದರು ಎಂದು ಹೇಳಿಕೊಳ್ಳುವುದೇ ಹಿರಿಯರಿಗೆ ಹೆಮ್ಮೆಯ ವಿಷಯ. ಗಾಂಧಿ ಎನ್ನುವ ವ್ಯಕ್ತಿತ್ವ ಅದೆಷ್ಟೋ ದೇಶಪ್ರೇಮಿಗಳಿಗೆ ಪ್ರೇರಣೆ ಆಗಿದೆ. ಮಹಾತ್ಮ ಗಾಂಧೀಜಿಯವರ 151ನೇ ಜನ್ಮ ದಿನಾಚರಣೆ ಸಂದರ್ಭದಲ್ಲಿ ಗಾಂಧೀಜಿ ದೊಡ್ಡಬಳ್ಳಾಪುರಕ್ಕೆ ಹಾಗೂ ತಾಲೂಕಿಗೆ ಸಮೀಪದ ನಂದಿ ಬೆಟ್ಟಕ್ಕೆ ಭೇಟಿ ನೀಡಿದ್ದ ಸಂದರ್ಭಗಳ ಕುರಿತು ಒಂದು ಮೆಲುಕು.
ದೊಡ್ಡಬಳ್ಳಾಪುರದಲ್ಲಿ ಗಾಂಧಿ:
ಗಾಂಧೀಜಿಯನ್ನು ಹೊರತಾಗಿಟ್ಟು ಸ್ವಾತಂತ್ರ್ಯ ಹೋರಾಟದ ಮೆಲುಕುಗಳನ್ನು ಹಾಕಿದರೆ ಪರಿಪೂರ್ಣವಾಗುವುದಿಲ್ಲ ಎನ್ನುವುದು ಸರ್ವವಿಧಿತ. ದೊಡ್ಡಬಳ್ಳಾಪುರಕ್ಕೆ 1934ರ ಜನವರಿ 4ರಂದು ಭೇಟಿ ನೀಡಿದ್ದರು. ಗಾಂಧಿ ನಮ್ಮ ಊರಿಗೆ ಬಂದಿದ್ದರು. ನಾವು ಗಾಂಧೀಜಿಯನ್ನು ಕಂಡಿದ್ದೇವೆ ಎನ್ನುವ ಹಿರಿಯರಿಗೆ ಏನೋ ಧನ್ಯತಾಭಾವ. ದೊಡ್ಡಬಳ್ಳಾಪುರಕ್ಕೆ ಗಾಂಧೀಜಿ ಭೇಟಿ ನೀಡಿದ್ದ ಸಂದರ್ಭದಲ್ಲಿ ಇಲ್ಲಿನ ಜನಸಂಖ್ಯೆ ಬರೀ 25 ಸಾವಿರ. ಇಲ್ಲಿನ ಜನತೆಗೆ ದೇಶ ಪ್ರೇಮದ ಭಾಷಣ ಮಾಡಿ, ಊರಿನ ಸ್ವಾತಂತ್ರ್ಯ ಹೋರಾಟಗಾರರಾದ ಸಿದ್ದಲಿಂಗಯ್ಯ, ರುಮಾಲೆ ಭದ್ರಣ್ಣ, ಮುಗುವಾಳಪ್ಪ ಮೊದಲಾದವರಿಗೆ ಇಲ್ಲಿ ಕಾಂಗ್ರೆಸ್ ಕಟ್ಟಿ ಬೆಳೆಸಿ, ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ಉತ್ತಮ ನಾಯಕರಾಗಿ ರೂಪುಗೊಳ್ಳಲು ಗಾಂಧೀಜಿ ಪ್ರೇರಣೆಯಾದರು. ಗಾಂಧೀಜಿ ದೊಡ್ಡಬಳ್ಳಾಪುರಕ್ಕೆ ಬಂದ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಟಿ.ಸಿದ್ದಲಿಂಗಯ್ಯ, ರುಮಾಲೆ ಚನ್ನಬಸವಯ್ಯ, ರುಮಾಲೆ ಭದ್ರಣ್ಣ, ಎಚ್.ಮುಗುವಾಳಪ್ಪ, ನಾ.ನಂಜುಂಡಯ್ಯ ಮುಂತಾದವರೊಂದಿಗೆ ಊರಿನ ಜನ ಹೂ ಮಾಲೆ ಹಾಕಿ ಆತ್ಮೀಯ ಸ್ವಾಗತ ಕೋರಿದ್ದರು. ಪುರಸಭೆಯವರು ಗಾಂಧೀಜಿಗೆ ಭಿನ್ನವತ್ತಳೆ ನೀಡಿ ಸನ್ಮಾನಿಸಿ, ಹರಿಜನ ನಿಧಿಗಾಗಿ ಅಂದಿನ ಕಾಲದಲ್ಲಿಯೇ 500ರೂಗಳನ್ನು ಸಂಗ್ರಹಿಸಿ ನೀಡಿದರು. ಅದನ್ನು ಸ್ವೀಕರಿಸಿದ ಗಾಂಧೀಜಿಯವರು ಸ್ಥಳೀಕರು ತೋರಿದ ಆದರಾಭಿಮಾನಗಳಿಗಾಗಿ ವಂದಿಸಿದ್ದರು. ಗಾಂಧೀಜಿಯವರು ಉಪನ್ಯಾಸ ನೀಡಿದ ಪ್ರದೇಶಕ್ಕೆ ಅವರ ಸ್ಮರಣಾರ್ಥವಾಗಿ ಗಾಂಧಿನಗರ ಎಂದು ನಾಮಕರಣ ಮಾಡಲಾಗಿ ಇಂದಿಗೂ ಹಳೇ ಬಸ್ ನಿಲ್ದಾಣ ಸಮೀಪದ ಪೇಟೆಗೆ ಗಾಂಧಿನಗರ ಹೆಸರಿದೆ. ನಂದಿ ಬೆಟ್ಟಕ್ಕೆ ಗಾಂಧೀಜಿ:
ತಾಲೂಕಿಗೆ ಸಮೀಪವೇ ಇರುವ ನಂದಿಬೆಟ್ಟಕ್ಕೆ 1927ರಲ್ಲಿ 45 ದಿನ ಹಾಗೂ 1936ರಲ್ಲಿ ಮೂರು ವಾರಗಳ ಕಾಲ ಗಾಂಧೀಜಿ ತಂಗಿದ್ದರು. ಗಾಂಧಿ ಅವರಿಗೆ ಅಪೊಪ್ಲಿಕ್ಸ್(ಲಕ್ವಾ)ಗೆ ಸಂಬಂಧಿಸಿದ ಕಾಯಿಲೆ ಹಾಗೂ ರಕ್ತದೊತ್ತಡ ಜಾಸ್ತಿ ಸಂಪೂರ್ಣ ವಿಶ್ರಾಂತಿ ತೆಗೆದುಕೊಳ್ಳಬೇಕು ಎಂದು ಕುಟುಂಬ ವೈದರ ಲಹೆ ಮೇರೆಗೆ ನಂದಿ ಗಿರಿಧಾಮವೇ ಪ್ರಶಸ್ತ ಸ್ಥಳವೆಂದು ತೀರ್ಮಾನಿಸಿ ಇಲ್ಲಿಗೆ ಬಂದಿದ್ದರು. ಗಿರಿಧಾಮದಲ್ಲಿ ಬಂದುಹೋಗುವವರ ಸಂದಣಿ ಹೆಚ್ಚಿ, ಗಾಂಧಿ ಆರೋಗ್ಯ ಕೈ ಕೊಟ್ಟಿದ್ದೂ ಉಂಟು. ಆದರೆ ವೈದ್ಯರ ಕಟ್ಟುನಿಟ್ಟಿನ ನಿಗಾದಿಂದ ಅವರು ಬಹುಬೇಗ ಚೇತರಿಸಿಕೊಂಡರು.
ವಿಶೇಷ; ಡಿ.ಶ್ರೀಕಾಂತ

