ದೊಡ್ಡಬಳ್ಳಾಪುರ: ಉತ್ತರ ಪ್ರದೇಶದಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಮೇಲೆ ನಡೆದ ಪೊಲೀಸ್ ದೌರ್ಜನ್ಯವನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದ್ದು, ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದೆ.
ಸರಕಾರದ ಕ್ರಮ ಹಾಗೂ ಪೊಲೀಸರ ದೌರ್ಜನ್ಯ ಖಂಡಿಸಿ ಶುಕ್ರವಾರ ಕನ್ನಡ ಜಾಗೃತ ಭವನದಿಂದ ತಾಲೂಕು ಕಚೇರಿ ವೃತ್ತದ ವರೆಗೆ ಕಾಂಗ್ರೆಸ್ ನಾಯಕರು ಶಾಸಕ ಟಿ.ವೆಂಕಟರಮಣಯ್ಯ ನೇತೃತ್ವದಲ್ಲಿ ರ‍್ಯಾಲಿ ಹಾಗೂ ಪ್ರತಿಭಟನೆಯನ್ನು ನಡೆಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಶಾಸಕ ಟಿ.ವೆಂಕಟರಮಣಯ್ಯ, ಉತ್ತರ ಪ್ರದೇಶದ ಗೂಂಡಾ ರಾಜ್ಯವಾಗಿ ಬದಲಾಗಿದ್ದು ರಾಹುಲ್, ಪ್ರಿಯಾಂಕಾ ಅಂಥವರಿಗೆ ರಕ್ಷ ಣೆ ಸಿಗುತ್ತಿಲ್ಲವೆಂದರೆ ಇನ್ನು ಜನಸಾಮಾನ್ಯರ ಪಾಡೇನು? ಈ ಪೊಲೀಸ್ ದೌರ್ಜನ್ಯವನ್ನು ಖಂಡಿಸಬೇಕಿದೆ, ಸಂತ್ರಸ್ತರ ಪರವಾಗಿ ಹೋರಾಟ ನಡೆಸುತ್ತಿದ್ದ ರಾಹುಲ್ ಹಾಗೂ ಪ್ರಿಯಾಂಕಾ ಗಾಂಧಿಯವರನ್ನು ಯಾವ ಕಾನೂನಿನ ಅನ್ವಯ ಬಂಧಿಸಿದ್ದಾರೆ. ನೊಂದ ಕುಟುಂಬದ ಭೇಟಿಗೆ ಏಕೆ ಅವಕಾಶ ಕಲ್ಪಿಸಿಲ್ಲ? ಪ್ರಧಾನಿ ಮೋದಿಯವರು ಭೇಟಿ ಬಚಾವೋ ಆಂದೋಲನದ ಬಗ್ಗೆ ಈಗ್ಯಾಕೆ ಮಾತನಾಡುತ್ತಿಲ್ಲ?, ಎಂದು ಪ್ರಶ್ನಿಸಿದರು.
ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ ಮಾತನಾಡಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಸಂತ್ರಸ್ತೆ ಕುಟುಂಬದವರಿಗೆ ಸಾಂತ್ವನ ಹೇಳಲು ತೆರಳುತ್ತಿದ್ದರು. ದಾರಿ ಮಧ್ಯೆಯೇ ಪೊಲೀಸರು ತಡೆದರು. ಈ ವೇಳೆ ರಾಹುಲ್ ಗಾಂಧಿಯವರನ್ನು ಪೊಲೀಸರು ತಳ್ಳಾಡಿ ದೌರ್ಜನ್ಯ ಎಸಗಿದ್ದಾರೆ. ದಲಿತರ ಮೇಲೆ ನಿರಂತರ ದೌರ್ಜನ್ಯ ತಡೆಯುವಲ್ಲಿ ಬಿಜೆಪಿ ಸರಕಾರ ವಿಫಲವಾಗಿದ್ದು ಸಿಎಂ ಆದಿತ್ಯನಾಥ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕೆಪಿಸಿಸಿ ಸದಸ್ಯ ಎಂ.ಜಿ.ಶ್ರೀನಿವಾಸ್, ಕೆಎಂಎಫ್ ನಿರ್ದೇಶಕ ಬಿ.ಸಿ.ಆನಂದ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆದಿತ್ಯನಾಗೇಶ್, ತಾಪಂ ಅಧ್ಯಕ್ಷೆ ರತ್ನಮ್ಮ ಜಯರಾಂ, ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ತಿಪ್ಪೂರು ಬೈರೇಗೌಡ, ಕಸಬ ಬ್ಲಾಕ್ ಅಧ್ಯಕ್ಷ ಅಪ್ಪಿವೆಂಕಟೇಶ್, ನಗರ ಬ್ಲಾಕ್ ಪ್ರಭಾರ ಅಧ್ಯಕ್ಷ ಅಂಜನಮೂರ್ತಿ, ಎಪಿಎಂಸಿ ಮಾಜಿ ಅಧ್ಯಕ್ಷ ತಿ.ರಂಗರಾಜು, ಮಹಿಳಾ ಜಿಲ್ಲಾ ಅಧ್ಯಕ್ಷೆ ರೇವತಿ ಅನಂತರಾಮ್, ನಗರ ಅಧ್ಯಕ್ಷೆ ಪ್ರಭಾವತಿ ಸೇರಿದಂತೆ ವಿವಿಧ ಘಟಕ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾಜರಿದ್ದರು.

