ದೊಡ್ಡಬಳ್ಳಾಪುರ: ಈ ಬಾರಿ ಹಬ್ಬ ಉತ್ಸವಗಳಿಗೆ ಕರೊನಾ ಕಂಕಟವಿದ್ದರೂ ಸಹ ಹೂ ಹಣ್ಣು, ಬಾಳೆಕಂದು, ಬೂದು ಕುಂಬಳ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಗಳು ಮಾತ್ರ ದುಬಾರಿಯಾಗಿವೆ. ತಾಲೂಕಿನಲ್ಲಿ ಆಯುಧ ಪೂಜೆ, ವಿಜಯದಶಮಿ ಹಬ್ಬಕ್ಕೆ ಅದ್ದೂರಿ ಸ್ವಾಗತ ನಡೆದಿದೆ.
ನಗರದ ಮಾರುಕಟ್ಟೆ ಪ್ರದೇಶದಲ್ಲಿ ಅಂಗಡಿಗಳು ಹಬ್ಬಕ್ಕೆಂದೇ ತೆರೆದಿವೆ. ಆದರೆ ಹೂವು ಬೂದುಕುಂಬಳದ ಬೆಲೆಗಳು ಗಗನಕ್ಕೇರಿವೆ. ಬೂದು ಕುಂಬಳಕಾಯಿ ಕೆಜಿಗೆ 30ರಿಂದ 40ರೂ ಇದೆ. ಕಾಕಡ, ಮಳ್ಳೆ ಹೂವಿನ ಬೆಲೆ ಕೆ.ಜಿಗೆ 700ರಿಂದ 800 ರೂಗಳ ವರೆಗಿದ್ದರೆ ಕನಕಾಂಬರ 1400 ರೂ ಶಾಮಂತಿಗೆ, ಬಟನ್ಸ್ , ಗುಲಾಬಿ ಮೊದಲಾದ ಹೂವಿನ ಬೆಲೆಗಳು ಕೆ.ಜಿಗೆ 200 ದಾಟಿವೆ. ಬಾಳೆ ಹಣ್ಣು ಕೆಜಿಗೆ 30 ರಿಂದ 80 ರೂ, ಸೇರಿದಂತೆ ಇತರ ಹಣ್ಣುಗಳ ಬೆಲೆಗಳೂ ಕೆಜಿಗೆ 20 ರಿಂದ 30 ಹೆಚ್ಚಾಗಿವೆ. ಬಾಳೆಕಂದುಗಳ ಬೆಲೆ ಸಹ ಹೆಚ್ಚಾಗಿದೆ.
ಆಯುಧ ಪೂಜೆಗಾಗಿ ಮಗ್ಗಗಳು ಯಂತ್ರಗಳು, ವಾಹನಗಳು ಮೊದಲಾದವುಗಳನ್ನು ಶುದ್ದ ಮಾಡಿ ಪೂಜೆಗೆ ಅಣಿ ಮಾಡಿಕೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಕಳೆದ ಒಂದು ವಾರದಿಂದ ತಾಲೂಕಿನಲ್ಲಿ ಬೀಳುತ್ತಿದ್ದು, ಹೂವುಗಳ ಮೇಲೆ ತೇವಾಂಶ ಹೆಚ್ಚಾಗಿ ಸಹಜವಾಗಿ ಬೆಲೆಗಳು ಹೆಚ್ಚಾಗಿವೆ.ಕರೊನಾದಿಂದ ನೇಕಾರಿಕೆ ಉದ್ಯಮ ಕುಸಿದಿದ್ದು, ಕೃಷಿ ಚಟುವಟಿಕೆಗಳು ಚೇತರಿಸಿಕೊಳ್ಳಬೇಕಿದೆ.
ಈ ನಡುವೆ ಈ ವರ್ಷ ಕರೊನಾ ಕಂಟಕ ಎದುರಾಗಿದೆ. ಎಲ್ಲದಕ್ಕೂ ಬೆಲೆ ದುಬಾರಿಯಾಗಿವೆ. ಬೆಲೆ ಏರಿಕೆ ನೋಡಿದರೆ ಹಬ್ಬ ಮಾಡಲು ಉತ್ಸಾಹವೇ ಇಲ್ಲದಿದ್ದರೂ ಹಿಂದಿನಿಂದಲೂ ಆಚರಿಸುತ್ತಿರುವ ಹಬ್ಬಗಳನ್ನು ಆಚರಿಸಲೇಬೇಕಲ್ಲ ಎನ್ನುತ್ತಾರೆ ಬಹುಪಾಲು ಸಾರ್ವಜನಿಕರು.

