ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೇಂದ್ರದ ಹೆಸರು ವಿವಾದ ತೀವ್ರ ಸ್ವರೂಪ ಪಡೆಯುತ್ತಿದ್ದು, ಜಿಲ್ಲಾ ಕೇಂದ್ರದ ಹೆಸರು ತಿಕ್ಕಾಟದ ನಡುವೆಯೇ ಕಾರ್ಯಕ್ರಮ ಒಂದರ ಸುದ್ದಿಯಲ್ಲಿ ದೇವನಹಳ್ಳಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಂದು ವರದಿ ಪ್ರಕಟಿಸಿರುವ ಕನ್ನಡ ದಿನಪತ್ರಿಕೆಯ ಮುಖ್ಯ ಸಂಪಾದಕರ ವಿರುದ್ದ ಕಾನೂನು ಕ್ರಮಕೈಗೊಳ್ಳಬೇಕೆಂದು ನ್ಯಾಯವಾದಿ ಟಿ.ಕೆ.ಹನುಮಂತರಾಜ್ ದೂರು ನೀಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಆಯುಧ ಪೂಜೆ ಕಾರ್ಯಕ್ರಮದ ಸುದ್ದಿಗಳನ್ನು ದೇವನಹಳ್ಳಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಂದು ಪ್ರಕಟಿಸಿದ್ದು. ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೇಂದ್ರವನ್ನು ದೇವನಹಳ್ಳಿ ಜಿಲ್ಲೆಯನ್ನಾಗಿ ಘೋಷಸುವಂತೆ ಮಾಡಿರುವ ಒತ್ತಾಯಕ್ಕೆ ಬೆಂಬಲ ನೀಡುವಂತೆ ಪತ್ರಿಕೆ ವರದಿ ಮಾಡಿರುವುದು ಕಾನೂನು ಬಾಹಿರವಾಗಿದ್ದು, ಪತ್ರಿಕೆ ಮುಖ್ಯ ಸಂಪಾದಕರ ವಿರುದ್ದ ಕಾನೂನು ಕ್ರಮಕೈಗೊಳ್ಳಬೇಕೆಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಆನ್ಲೈನ್ ಮೂಲಕ ದೂರು ನೀಡಿದ್ದಾರೆ.
ಈಗಾಗಲೇ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೇಂದ್ರದ ಹೆಸರು ಬದಲಾವಣೆಗೆ, ಇತರ ತಾಲೂಕುಗಳಾದ ಹೊಸಕೋಟೆ, ನೆಲಮಂಗಲ ಹಾಗೂ ದೊಡ್ಡಬಳ್ಳಾಪುರ ತಾಲೂಕುಗಳಲ್ಲಿ ವಿರೋಧ ವ್ಯಕ್ತವಾಗಿದ್ದು, ಹೆಸರು ಬದಲಿಸದಂತೆ ಪ್ರತಿಭಟನೆಗಳು ನಡೆಯುತ್ತಿವೆ. ಈ ಬೆನ್ನಲ್ಲೆ ಪತ್ರಿಕೆ ದೇವನಹಳ್ಳಿ ಜಿಲ್ಲಾಧಿಕಾರಿ ಕಚೇರಿಯೆಂದು ಬರೆದಿರುವುದು ತೀವ್ರ ವಿವಾದವನ್ನು ಉಂಟುಮಾಡಿದ್ದು, ಆಕ್ಷೇಪ ವ್ಯಕ್ತವಾಗಿದೆ.
ಪತ್ರಿಕೆಯ ಬಹಿಷ್ಕರಿಸುವ ಎಚ್ಚರಿಕೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯನ್ನು, ದೇವನಹಳ್ಳಿ ಜಿಲ್ಲಾಧಿಕಾರಿ ಕಚೇರಿ ಎಂದು ಮುದ್ರಿಸಿರುವುದು ಪೂರ್ವ ನಿಯೋಜಿತ ಶಡ್ಯಂತ್ರವಾಗಿದೆ. ಇಂತಹ ಯಾವುದೇ ಕ್ರಮಕ್ಕೆ ಮುಂದಾಗುವ ಪತ್ರಿಕೆಯಾಗಲಿ, ವ್ಯಕ್ತಿಯನ್ನಾಗಲಿ ಬಹಿಷ್ಕರಿಸಲಾಗುವುದೆಂದು ಕರವೇ ಪ್ರವೀಣ್ ಶೆಟ್ಟಿ ಬಣದ ರಾಜ್ಯ ಕಾರ್ಯದರ್ಶಿ ರಾಜಘಟ್ಟರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

