ಹೊಸಕೋಟೆ: ಜಿಲ್ಲಾಪಂಚಾಯಿತಿ ಅಧ್ಯಕ್ಷ ಸ್ಥಾನದ ರಾಜೀನಾಮೆ ಸಲ್ಲಿಸಿದ್ದ ಜಯಮ್ಮ ಕಾಂಗ್ರೆಸ್ ಪಕ್ಷವನ್ನು ತೊರೆದು ವಿಧಾನ ಪರಿಷತ್ ಸದಸ್ಯ ಎಂ.ಟಿ.ಬಿ.ನಾಗರಾಜ್ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.
ದೊಡ್ಡಬಳ್ಳಾಪುರ ತಾಲ್ಲೂಕಿನ ಸಾಸಲು ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಚುನಾಯಿತರಾಗಿದ್ದ ಜಯಮ್ಮ. ಜಿಪಂ ಅಧ್ಯಕ್ಷರಾಗಿದ್ದ ಪ್ರಸಾದ್ ನಂತರ ಎರಡನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಆದರೆ ಪೂರ್ವ ನಿರ್ಧಾರದಂತೆ ಕಾಂಗ್ರೆಸ್ ಪಕ್ಷದ ವರಿಷ್ಟರು ಸೂಚನೆಯಂತೆ ರಾಜೀನಾಮೆಗೆ ನೀಡಲು ನಿರಾಕರಿಸಿದ ಕಾರಣ ಅವಿಶ್ವಾಸ ನಿರ್ಣಯ ಸಭೆಗೆ ಸದಸ್ಯರನ್ನು ನಿರ್ಧರಿಸಿದ್ದರು ಎನ್ನಲಾಗಿತ್ತು.
ಈ ಬೆಳವಣಿಗೆಯಿಂದ ಕಾಂಗ್ರೆಸ್ ವರಿಷ್ಟರ ವಿರುದ್ದ ತಿರುಗಿ ಬಿದ್ದ ಜಯಮ್ಮ ಅವರು ದೊಡ್ಡಬಳ್ಳಾಪುರ ಶಾಸಕ ಟಿ.ವೆಂಕಟರಮಣಯ್ಯ ಹಾಗೂ ಮಾಜಿ ಸಚಿವ ಕೃಷ್ಣಬೈರೇಗೌಡರ ಹರಿಹಾಯ್ದಿದ್ದು ಕೆಲ ಪತ್ರಿಕೆಗಳಲ್ಲಿ ವರದಿಯಾಗಿತ್ತಲ್ಲದೆ, ಶಾಸಕ ಟಿ.ವೆಂಕಟರಮಣಯ್ಯ ಜಯಮ್ಮರ ಹೇಳಿಕೆಯನ್ನು ಖಂಡಿಸಿದ್ದರು.
ಈ ಎಲ್ಲಾ ಬೆಳವಣಿಗೆ ಜಯಮ್ಮ ಅವರು ಬಿಜೆಪಿ ಸೇರ್ಪಡೆಯಾಗಲು ಕಾರಣ ಎನ್ನಲಾಗುತ್ತಿದ್ದು, ಪತಿ ಲಕ್ಷ್ಮಿ ನಾರಾಯಣ್ ಜೊತೆ ಕೆಲವೇ ಕ್ಷಣಗಳ ಹಿಂದೆ ಹೊಸಕೋಟೆಯ ಬಿಜೆಪಿ ಕಚೇರಿಯಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ಇವರನ್ನು ಎಂಟಿಬಿ ನಾಗರಾಜ್ , ಜಿಲ್ಲಾ ಬಿಜೆಪಿ ಅಧ್ಯಕ್ಷ ಎ.ವಿ.ನಾರಾಯಣಸ್ವಾಮಿ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯ ಸಿ.ನಾಗರಾಜ್ ಬಿಜೆಪಿ ಶಾಲು ಹೊದಿಸಿ, ಪಕ್ಷದ ಬಾವುಟ ನೀಡಿ ಪಕ್ಷಕ್ಕೆ ಸ್ವಾಗತಿಸಿದ್ದಾರೆ.

