ದೊಡ್ಡಬಳ್ಳಾಪುರ: ಕೊವಿಡ್-19 ಸಂಕಷ್ಟದ ನಡುವೆಯೂ ತಾಲೂಕಿನಾದ್ಯಂತ ವಿಜಯದಶಮಿ ಹಬ್ಬವನ್ನು ಸಡಗರ ಸಂಭ್ರಮಗಳಿಂದ ಆಚರಿಸಲಾಯಿತು. ಶಕ್ತಿ ದೇವಿಯ ಆರಾಧನೆ, ಸಾಂಸ್ಕತಿಕ ಆಚರಣೆಗಳ ಅನಾವರಣವಾಗುವ ನವರಾತ್ರಿಯ ಒಂಬತ್ತು ದಿನಗಳು ನಗರ ಹಾಗೂ ಗ್ರಾಮಾಂತರ ಪ್ರದೇಶಗಳ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.
ಗ್ರಾಮೀಣ ಪ್ರದೇಶಗಳಲ್ಲಿ ಬನ್ನಿ ಹೊಡೆಯುವ ಆಚರಣೆ ನಡೆಯಿತು. ಮಹಿಳೆಯರು ಬನ್ನಿ ಮರಕ್ಕೆ ಮಳ್ಳು ಕಟ್ಟಿ ಪೂಜೆ ಸಲ್ಲಿಸಿದರು. ನಗರದ ನೆಲದಾಂಜನೇಯಸ್ವಾಮಿ ದೇವಾಲಯದಲ್ಲಿನ ಬನ್ನಿ ಮರಕ್ಕೆ ಭಕ್ತಾದಿಗಳು ಪೂಜೆ ಸಲ್ಲಿಸಿದರು.
ನಗರದ ವನ್ನಿಗರ ಪೇಟೆಯಲ್ಲಿರುವ ಶ್ರೀ ಸಪ್ತ ಮಾತೃಕಾ ಮಾರಿಯಮ್ಮ ದೇವಾಲಯದಲ್ಲಿ ನವರಾತ್ರಿ ಅಂಗವಾಗಿ ದುರ್ಗಾ ದೇವಿಯ ಮೂರ್ತಿ ಹಾಗೂ ದಸರಾ ಬೊಂಬೆಗಳನ್ನು ಪ್ರತಿಷ್ಟಾಪಿಸಿ, ದೇವಿಗೆ ಪ್ರತಿನಿತ್ಯ ವಿಶೇಷ ಅಲಂಕಾರ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ದುರ್ಗಾದೇವಿ ಮೂರ್ತಿಯನ್ನು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ವಿಸರ್ಜಿಸಲಾಯಿತು. ನಗರದ ಕಾಳಮ್ಮ ದೇವಾಲಯದಲ್ಲಿ ಪ್ರತಿನಿತ್ಯ ವಿಶೇಷ ಅಲಂಕಾರ ಮಾಡಿ ವಿಜಯದಶಮಿಯಂದು ನಗರ ಉತ್ಸವ ನಡೆಸಿ ಬನ್ನಿ ಮಂಟಪದ ಪೂಜೆ ನೆರವೇರಿಸಲಾಯಿತು.
ನಗರದ ತೇರಿನ ಬೀದಿಯಲ್ಲಿರುವ ಶ್ರೀ ಶಾರದಾ ಶಂಕರ ಸದನದಲ್ಲಿ ಶರನ್ನವರಾತ್ರೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಮುತ್ಯಾಲಮ್ಮ, ಶ್ರೀ ಜನಾರ್ಧನಸ್ವಾಮಿ,ಶ್ರೀ ವೇಣುಗೋಪಾಲಸ್ವಾಮಿ, ಶ್ರೀ ರಾಮಲಿಂಗ ಚೌಡೇಶ್ವರಿ, ತೇಹಾಗೂ ಕುಚ್ಚಪ್ಪನಪೇಟೆಯ ಮಾರಮ್ಮದೇವಿ ದೇವಾಲಯ, ಆರೂಢಿಯ ವಡಸಲಮ್ಮ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಗಳು ನಡೆದವು. ನಗರದ ವೀರಭದ್ರನಪಾಳ್ಯದ ಪಿಂಜಾರು ಬೀಡುವಿನಲ್ಲಿರುವ ಮುನೇಶ್ವರ ಸ್ವಾಮಿ ದೇವಾಲಯದಲ್ಲಿ ದಸರಾ ಅಂಗವಾಗಿ ಪೂಜಾ ಕಾರ್ಯಕ್ರಮ ನಡೆಸಲಾಯಿತು.
ಆಯುಧಪೂಜೆ: ವಿಜಯದಶಮಿಗೂ ಮುನ್ನ ನವಮಿಯಂದು ಆಚರಿಸುವ ಆಯುಧಪೂಜೆಯನ್ನು ಜನತೆ ಶ್ರದ್ದಾ ಭಕ್ತಿಗಳಿಂದ ನೆರವೇರಿಸಿದರು. ನೇಕಾರಿಕೆಯೇ ಪ್ರಧಾನವಾಗಿರುವ ನಗರದಲ್ಲಿ ಮಗ್ಗಗಳು ಹಾಗೂ ಯಂತ್ರಗಳಿಗೆ ಪೂಜೆ ಸಲ್ಲಿಸಲಾಯಿತು. ವಾಹನಗಳು ಮತ್ತಿತರ ಸಾಧನಗಳನ್ನು ಹೂಗಳಿಂದ ಅಲಂಕರಿಸಿ ಪೂಜೆ ಸಲ್ಲಿಸುತ್ತಿರುವ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು. ನಗರಸಭೆ ವತಿಯಿಂದ, ನಗರಸಭೆಯ ವಾಹನಗಳು ಹಾಗೂ ವಿವಿಧ ಪರಿಕರಗಳಿಗೆ ಆಯುಧಪೂಜೆ ಸಲ್ಲಿಸಲಾಯಿತು.

