ದೊಡ್ಡಬಳ್ಳಾಪುರ: ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ಕಾರ್ಮಿಕ ಕಾಯ್ದೆಯನ್ನು ಏಪ್ರಿಲ್ನಿಂದ ಅನುಷ್ಠಾನಗೊಳಿಸಲು ಮುಂದಾಗಿರುವುದನ್ನು ವಿರೋಧಿಸಿ ನವೆಂಬರ್ 26 ರಂದು ವಿವಿಧ ಕಾರ್ಮಿಕ, ರೈತ ಸಂಘಟನೆಗಳು ಜಂಟಿಯಾಗಿ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ನಡೆಸಲಾಗುವುದು ಎಂದು ಸೆಂಟರ್ ಆಫ್ ಇಂಡಿಯಾನ್ ಟ್ರೇಡ್ ಯೂನಿಯನ್ಸ್ ರಾಜ್ಯ ಕಾರ್ಯದರ್ಶಿ ಕೆ.ಎನ್.ಉಮೇಶ್ ಹೇಳಿದರು.
ಅವರು ನಗರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರ ಕೋವಿಡ್ ಸಂಕಷ್ಟದ ಸಂದರ್ಭವನ್ನು ನೆಪವಾಗಿಟ್ಟುಕೊಂಡು ರೈತ ಹಾಗೂ ಕಾರ್ಮಿಕ ವಿರೋಧಿ ಕಾನೂನುಗಳನ್ನು ಜಾರಿಗೆ ತರುತ್ತಿದೆ. ದೇಶದಲ್ಲಿ ಯೋಜನಾ ರಹಿತವಾಗಿ ಲಾಕ್ಡೌನ್ ಜಾರೊಗೊಳಿಸಿದ ಪರಿಣಾಮ ಲಕ್ಷಾಂತರ ಜನ ಕಾರ್ಮಿಕರು ಸಂಖಷ್ಟಕ್ಕೆ ಸುಲುಕುವಂತಾಯಿತು. ಇಂದಿಗೂ ಸಹ ದೇಶದಲ್ಲಿ ಆರ್ಥಿಕ ಚಟುವಟಿಕೆಗಳು ಪೂರ್ಣ ಪ್ರಮಾಣದಲ್ಲಿ ಆರಂಭವಾಗಿಲ್ಲ. ಸರ್ಕಾರದ ತಪ್ಪು ನಿರ್ಧಾರದಿಂದಾಗಿಯೇ ಸಂಕಷ್ಟಕ್ಕೆ ಸಿಲುಕುರುವ ಆದಾಯ ತೆರಿಗೆ ಪಾವತಿಯಿಂದ ಹೊರಗಿರುವ ಎಲ್ಲರಿಗೂ ಪ್ರತಿ ತಿಂಗಳು ₹7 ಸಾವಿರ ಪರಿಹಾರವನ್ನು ಅವರ ಖಾತೆಗಳಿಗೆ ಜಮೆ ಮಾಡಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರದ ಹೊಸ ಕಾರ್ಮಿಕ ಕಾಯ್ದೆಗೆ ರಾಷ್ಟ್ರಪತಿಗಳು ಈಗಾಗಲೇ ಅಂಕಿತ ಹಾಕಿದ್ದಾರೆ. ಕಾಯ್ದೆಯಲ್ಲಿನ ಕಾನೂನುಗಳು ಏಪ್ರಿಲ್ನಿಂದ ಜಾರಿಗೆ ಬಂದರೆ 55 ವರ್ಷ ಮೇಲ್ಪಟ್ಟ ಅಥವಾ 35 ವರ್ಷ ಸೇವೆ ಸಲ್ಲಿಸಿರುವ ಎಲ್ಲರು ಬಲವಂತದ ನಿವೃತ್ತಿಗೆ ಒಳಗಾಗುವ ಅಪಾಯಗಳು ಇವೆ. ಇದು ಕೇವಲ ಕೈಗಾರಿಕೆಗಳಲ್ಲಿನ ಕಾರ್ಮಿಕರಿಗಷ್ಟೇ ಅಲ್ಲದೆ ಎಲ್ಲರಿಗೂ ಅನ್ವಯವಾಗಲಿದೆ. ಸಂವೀಧಾನ ಜಾರಿಗೆ ಬರುವ ಸಂದರ್ಭದಲ್ಲಿ ಅಂಬೇಡ್ಕರ್ ಅವರು ಕಾರ್ಮಿಕರಪರವಾಗಿ ಜಾರಿಗೆ ತಂದಿದ್ದ ಎಲ್ಲಾ ಕಾನೂನುಗಳನ್ನು ಈಗ ತಿದ್ದುಪಡಿ ಮಾಡುವ ಮೂಲಕ ಕಾರ್ಮಿಕರು ಸದಾ ಕಾಲ ಆತಂಕದಲ್ಲಿಯೇ ಜೀವನ ನಡೆಸುವ ಸ್ಥಿತಿ ನಿರ್ಮಾಣವಾಗುತ್ತಿದೆ. ಕೋವಿಡ್ ಮಹಾಮಾರಿಗಿಂತಲು ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ರೈತ, ಕಾರ್ಮಿಕ ವಿರೋಧಿ ನೀತೆಗಳೆ ಹೆಚ್ಚು ಅಪಾಯಕಾರಿಯಾಗಿವೆ. ಈ ಕಾಯ್ದೆಗಳ ವಿರುದ್ಧ ಜಂಟಿ ಹೋರಾಟಗಳು ನಡೆಯದ ಹೊರತು ಕೃಷಿಕರಿಗೆ, ಕಾರ್ಮಿಕರಿಗೆ ಉಳಿಗಾಲ ಇಲ್ಲದಾಗಲಿದೆ ಎಂದರು.
ಸಭೆಯಲ್ಲಿ ಸಿಐಟಿಯು ಜಿಲ್ಲಾ ಅಧ್ಯಕ್ಷ ನರಸಿಂಹಮೂರ್ತಿ, ಜಿಲ್ಲಾ ಉಪಾಧ್ಯಕ್ಷರಾದ ಪಿ.ಎ.ವೆಂಕಟೇಶ್,ವೀರಣ್ಣ, ಕಾರ್ಯದರ್ಶಿ ಚಂಬಣ್ಣ ಸಹ ಕಾರ್ಯದರ್ಶಿ, ನಳಿನಾಕ್ಷಿ ಇದ್ದರು.

