ದೊಡ್ಡಬಳ್ಳಾಪುರ: ನಗರದಲ್ಲಿ ಸರ್ಕಾರಿ ನೌಕರರ ಕಟ್ಟಡ ನಿರ್ಮಾಣ ಸೇರಿದಂತೆ ತಾಲ್ಲೂಕಿನ ಸರ್ಕಾರಿ ನೌಕರರಿಗೆ ತೊಂದರೆಯಾದಾಗ ತಕ್ಷಣ ಸ್ಪಂಧಿಸುತ್ತಿದ್ದ ನೌಕರರಲ್ಲಿ ರಾಮಕೃಷ್ಣಯ್ಯ ಅವರು ಮುಂಚೂಣಿಯವರು ಎಂದು ಸರ್ಕಾರಿ ನೌಕರರ ಸಂಘದ ಖಜಾಂಚಿ ಟಿ.ಪಿ.ಅಮರೇಶ್ ಹೇಳಿದರು.
ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿದ್ದ ಹಾಗೂ ಸರ್ಕಾರಿ ಸೇವೆಯಿಂದ ನಿವೃತ್ತರಾಗುತ್ತಿರುವ ರಾಮಕೃಷ್ಣಯ್ಯ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ನಗರದ ಅತ್ಯಂತ ಆಯಕಟ್ಟಿನ ಸ್ಥಳದಲ್ಲಿ ಸರ್ಕಾರಿ ನೌಕರರ ಸಂಘಕ್ಕೆ ನಿರಂತರವಾಗಿ ಆದಾಯ ಬರುವಂತೆ ಹಾಗೂ ಸರ್ಕಾರಿ ನೌಕರರ ಸಂಘಕ್ಕೆ ಶಾಶ್ವತ ನೆಲೆಯಾಗಿ ಕಟ್ಟಡವನ್ನು ನಿರ್ಮಿಸುವಲ್ಲಿ ಈ ಹಿಂದೆ ಸಂಘದ ಅಧ್ಯಕ್ಷರಾಗಿದ್ದ ಶಿವರಾಜ್ ಹಾಗೂ ರಾಮಕೃಷ್ಣಯ್ಯ ಅವರ ಸೇವೆ ಸ್ಮರಣೀಯವಾಗಿದೆ. ಸುಮಾರು 30 ವರ್ಷಗಳ ಕಾಲ ಸರ್ಕಾರಿ ಸೇವೆಯಲ್ಲಿ ಸಾರ್ಥಕ ಕೆಲಸಗಳನ್ನು ಮಾಡುವ ಮೂಲಕ ಸದಾ ನೌಕರರ ನೆನಪಿನಲ್ಲಿ ಉಳಿಯಲಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಸಂಘದ ಪ್ರಭಾರ ಅಧ್ಯಕ್ಷರಾನ್ನಾಗಿ ಎಂ.ಎಸ್.ರಾಜಶೇಖರ್ ಅವರನ್ನು ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿ ಧನಂಜಯ್ಯ, ಉಪಾಧ್ಯಕ್ಷ ಶ್ರೀನಿವಾಸಮೂರ್ತಿ, ವಕ್ತಾರ ಶ್ರೀನಿವಾಸ್ ಸೇರಿದಂತೆ ಸಂಘದ ಪದಾಧಿಕಾರಿಗಳು, ನಿರ್ದೇಶಕರು ಇದ್ದರು.

