ದೊಡ್ಡಬಳ್ಳಾಪುರ: ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ (ಟಿಎಪಿಎಂಸಿಎಸ್) ನ.8 ರಂದು ನಡೆಯಲಿರುವ ಚುನಾವಣೆಗೆ ನಾಮ ಪತ್ರ ಸಲ್ಲಿಸಲು ಶುಕ್ರವಾರ ಕೊನೆಯ ದಿನವಾಗಿತ್ತು.
13 ಸ್ಥಾನಗಳನ್ನು ಹೊಂದಿರುವ ಟಿಎಪಿಎಂಸಿಎಸ್‌ನ ‘ಎ’ ತರಗತಿಯ 4 ನಿರ್ದೇಶಕ ಸ್ಥಾನಗಳಿಗೆ 11 ಜನ ಹಾಗೂ ‘ಬಿ’ ತರಗತಿಯ 9 ನಿರ್ದೇಶಕ ಸ್ಥಾನಗಳಿಗೆ 61 ಜನ ನಾಮ ಪತ್ರಗಳನ್ನು ಸಲ್ಲಿಸಿದ್ದಾರೆ. ನಾಮ ಪತ್ರಗಳನ್ನು ಹಿಂದಕ್ಕೆ ಪಡೆಯಲು ನ.1 ರಂದು ಮಧ್ಯಾಹ್ನ 3 ಗಂಟೆಯವರೆಗೆ ಅವಕಾಶ ಇದೆ.
‘ಎ’ ತರಗತಿಯ ನಾಲ್ಕು ಸ್ಥಾನಗಳ ನಿರ್ದೇಶಕ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ನಾಮ ಪತ್ರಗಳನ್ನು ಸಲ್ಲಿಸಿದ್ದಾರೆ. ಈ ಚುನಾವಣೆಯಲ್ಲಿ ಯಾವುದೇ ರಾಜಕೀಯ ಪಕ್ಷದ ಚಿಹ್ನೆಯನ್ನು ಬಳಸದೇ ಇದ್ದರು ಸಹ ಇಂತಹದ್ದೇ ಪಕ್ಷದ ಬೆಂಬಲಿತ ಅಭ್ಯರ್ಥಿ ಎಂದು ಪಕ್ಷದ ಮುಖಂಡರ ಭಾವ ಚಿತ್ರಗಳನ್ನು ಬಳಸಿಕೊಂಡು ಪ್ರಚಾರ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ‘ಎ’ ತರಗತಿಯಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ವೇಣುಕುಮಾರ್ ಒಬ್ಬರು ಮಾತ್ರ ನಾಮ ಪತ್ರ ಸಲ್ಲಿಸಿದ್ದಾರೆ.
‘ಬಿ’ ತರಗತಿಗೆ ನೂಕು ನುಗ್ಗಲು: ಟಿಎಪಿಎಂಸಿಎಸ್ ಚುನಾವಣ ಇತಿಹಾಸದಲ್ಲೇ ಇದೇ ಪ್ರಥಮ ಬಾರಿಗೆ 9 ಸ್ಥಾನಗಳನ್ನು ಹೊಂದಿರುವ ‘ಬಿ’ ತರಗತಿಯಿಂದ ನಿರ್ದೇಶಕರಾಗಿ ಆಯ್ಕೆಯಾಗಲು ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ 61 ಜನ ನಾಮ ಪತ್ರಗಳನ್ನು ಸಲ್ಲಿಸಿದ್ದಾರೆ. ಈ ಪೈಕಿ ಎರಡು ಮೂರು ಬಾರಿ ಅಧ್ಯಕ್ಷರಾಗಿದ್ದವರು, ನಿರ್ದೇಶಕರಾಗಿದ್ದವರು ಸೇರಿದ್ದಾರೆ.
‘ಬಿ’ ತರಗತಿಯಿಂದ ನಿರ್ದೇಶಕರಾಗಿ ಆಯ್ಕೆಯಾಗಲು ಸಂಘದಲ್ಲಿ ಸದಸ್ಯತ್ವ ಹೊಂದಿರುವ ಹಾಗೂ ಸರ್ವ ಸದಸ್ಯರ ಮೂರು ಸಭೆಗಳಿಗೆ ಹಾಜರಾಗಿರುವವರು ಮಾತ್ರ ಅರ್ಹರಾಗಿದ್ದಾರೆ.

