ಬೆಂಗಳೂರು: ಗ್ರಾಮಾಂತರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಪ್ರಕಟವಾಗಿದ್ದು, ದೊಡ್ಡಬಳ್ಳಾಪುರ ತಾಲ್ಲೂಕಿನ ಮೂರು ಮಂದಿ ಸಾಧಕರಿಗೆ ಪ್ರಶಸ್ತಿ ದೊರಕಿದ್ದರೆ, ದೇವನಹಳ್ಳಿ ಹಾಗೂ ಹೊಸಕೋಟೆಯ ತಲಾ ಒಬ್ಬರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಪ್ರತಿ ವರ್ಷದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ಹಾಗೂ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಮತ್ತು ಜಿಲ್ಲಾಪಂಚಾಯಿತಿಯಿಂದ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತಿದೆ.
ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಕನ್ನಡ ನಾಡು ನುಡಿ ಹಾಗೂ ಸಂಸ್ಕೃತಿಯ ಕುರಿತು ಅಪಾರ ಕಾಳಜಿ ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ತು ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷೆ ಪ್ರಮೀಳಾ ಮಹದೇವ್, ಜಾನಪದ ಕಲಾವಿದೆಯಾಗಿ ಸೇವೆ ಸಲ್ಲಿಸಿ, ಸಮಾಜ ಮುಖಿ ಕಾರ್ಯಗಳಲ್ಲಿ ತೊಡಗಿರುವ ಕೆ.ನಾಗರತ್ಮಮ್ಮ, ಅಂತಾರಾಷ್ಟ್ರೀಯ ಯೋಗಪಟು, ಅರ್ಜೆಂಟೈನಾದಲ್ಲಿ 2018ರಲ್ಲಿ ವಿಶ್ವ ಯೋಗಾ ಚಾಂಪಿಯನ್, ಹಾಗೂ ವಿವಿಧ ಯೋಗ ಸ್ಪರ್ಧೆಯಲ್ಲಿ ಸಾಧನೆ ಮಾಡಿ ಅನೇಕ ಚಿನ್ನ, ಬೆಳ್ಳಿ ಪದಕ ಪಡೆದಿರುವ ಗಾನಶ್ರೀ ಎ ಆಯ್ಕೆಯಾಗಿದ್ದಾರೆ.
ಉಳಿದಂತೆ ದೇವನಹಳ್ಳಿ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷರು, ನಿವೃತ್ತ ಶಿಕ್ಷಕರಾದ ರಾಮಯ್ಯ. ಹೊಸಕೋಟೆ ತಾಲೂಕಿನ ಸಂಪಾದಕ ರಾಮೇಗೌಡ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇವರಿಗೆ ದೇವನಹಳ್ಳಿ ನಗರದ ಕ್ರೀಡಾಂಗಣದಲ್ಲಿ ನ.1ರಂದು ನಡೆಯುವ ಕನ್ನಡ ರಾಜ್ಯೋತ್ಸವ ದಿನಾಚರಣೆಯಂದು ಪ್ರಶಸ್ತಿ ನೀಡಲಾಗುವುದೆಂದು ಪ್ರಕಟಣೆ ತಿಳಿಸಿದೆ.

