ಬೆಂಗಳೂರು: ಐಪಿಎಲ್ ಟೂರ್ನಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ಕನ್ನಡ ರಾಜ್ಯೋತ್ಸವಕ್ಕೆ ಕನ್ನಡದಲ್ಲಿ ಶುಭಕೋರುವ ಮೂಲಕ ಕನ್ನಡಿಗರ ಮನೆ ಮನ ಗೆದ್ದಿದ್ದಾರೆ.
ರಾಜ್ಯದಾದ್ಯಂತ ಅತ್ಯಂತ ಸಡಗರ ಹಾಗೂ ಸಂಭ್ರಮದಿಂದ 65ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಇದಕ್ಕೆ ಆರ್ ಸಿಬಿ ತಂಡದ ಆಟಗಾರರು ಮತ್ತಷ್ಟು ಮೆರಗು ನೀಡಿದ್ದಾರೆ.
ಕನ್ನಡಿಗ ದೇವದತ್ ಪಡಿಕ್ಕಲ್, ತಂಡದ ನಾಯಕ ವಿರಾಟ್ ಕೊಹ್ಲಿ, ಶಹಬಾಜ್ ಅಹಮ್ಮದ್, ಡೇಲ್ ಸ್ಟೇನ್, ಎಬಿ ಡಿವಿಲಿಯರ್ಸ್, ಯುಜುವೇಂದ್ರ ಚಹಲ್, ಉಮೇಶ್ ಯಾದವ್, ಶಿವಂ ದುಬೆ ಕನ್ನಡದಲ್ಲೇ ಶುಭಕೋರಿದ್ದಾರೆ. ಈ ಮೂಲಕ ಆರ್ಸಿಬಿ ತಂಡ ಮತ್ತೊಮ್ಮೆ ಕನ್ನಡಿಗರ ಮನಗೆದ್ದಿದ್ದು, ಈ ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದು, ಪ್ಲೇ ಆಫ್ ಹೊಸ್ತಿಲಲ್ಲಿದೆ. ಪ್ರಸ್ತುತ 13 ಪಂದ್ಯಗಳನ್ನಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 7 ಗೆಲುವು ಹಾಗೂ 6 ಸೋಲುಗಳೊಂದಿಗೆ 14 ಅಂಕದೊಂದಿಗೆ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದೆ.

