ದೊಡ್ಡಬಳ್ಳಾಪುರ: ಕನ್ನಡ ನಾಡು, ಸಂಸ್ಕೃತಯ ಚಿಂತನೆ ಸದಾ ಕಾಯ್ದು ಬೆಳೆಸಿಕೊಳ್ಳಬೇಕಿದ್ದು, ಭಾಷಾಭಿಮಾನ ಬೆಳೆಸಿಕೊಳ್ಳದ ಹೊರತು ನಾಡನ್ನು ಸಮೃದ್ದಿಯ ಪಥದಲ್ಲಿ ಕೊಂಡೊಯ್ಯಲು ಸಾಧ್ಯವಿಲ್ಲ ಎಂದು ಉಪವಿಭಾಗಾಧಿಕಾರಿ ಅರುಳ್ ಕುಮಾರ್ ತಿಳಿಸಿದರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಗರದ ಡಾ.ರಾಜಕುಮಾರ್ ಕಲಾಭವನದಲ್ಲಿ ಆಯೋಜಿದ್ದ 65ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಕರ್ನಾಟಕ ಏಕೀಕರಣದ ಹಿನ್ನಲೆ ವಿವರಿಸಿದ ಅವರು, ಇಂದು ರಾಜ್ಯ ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ದಿಯತ್ತ ದಾಪುಗಾಲಾಕುತ್ತಿದ್ದು, ಮಾಹಿತಿ ತಂತ್ರಜ್ಞಾನದಲ್ಲಿ ಜಗತ್ತಿಗೇ ಪ್ರಸಿದ್ದಿಯಾಗಿದೆ. ಆಧುನಿಕತೆ ಬೆಳೆದಂತೆ ಹೊರ ರಾಜ್ಯ, ದೇಶಗಳ ವ್ಯಾಮೋಹಕ್ಕೆ ಒಳಗಾಗಿ ಕರ್ನಾಟಕದ ಚರಿತ್ರೆಯನ್ನು ಮರೆಯುತ್ತಿದ್ದು ಇಂದಿನ ಕನ್ನಡ ರಾಜ್ಯೋತ್ಸವದಲ್ಲಿ ನಾಡಿನ ಕುರಿತು ಮಕ್ಕಳಿಗೆ ಅರಿವುಂಟು ಮಾಡುವ ಸಂಕಲ್ಪ ಮಾಡಿ, ಎಷ್ಟೇ ಭಾಷೆಗಳನ್ನು ಕಲಿತರೂ ಸಹ ಕನ್ನಡಕ್ಕೆ ಆದ್ಯತೆ ನೀಡಬೇಕು ಎಂದರು.
ಸಮಾರಂಭದಲ್ಲಿ ರೈತ ಹಾಗೂ ಕನ್ನಡಪರ ಹೋರಾಟಗಾರ ಡಾ.ವೆಂಕಟರೆಡ್ಡಿ ಹೆಸರಿನಲ್ಲಿ ಕನ್ನಡ ಕಟ್ಟಾಳು ಪ್ರಶಸ್ತಿಯನ್ನು ಕನ್ನಡ ನಾಡು ನುಡಿಗೆ ಹೋರಾಟ ನಡೆಸಿದ ತಾಲೂಕಿನ ಹಿರಿಯ ಕನ್ನಡಪರ ಹೋರಾಟಗಾರರಾದ ತ.ನ.ಪ್ರಭುದೇವ್, ಸಂಜೀವ ನಾಯಕ್ ಹಾಗೂ ಜಿ.ಸತ್ಯನಾರಾಯಣ ಅವರಿಗೆ ನೀಡಿ ಸನ್ಮಾನಿಸಲಾಯಿತು. ಹಾಗೂ
ಕಳೆದ ಸಾಲಿನಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕರ ನೀಡಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ರತ್ನಮ್ಮ ಜಯರಾಂ, ಸದಸ್ಯೆ ರೇಣುಕಮ್ಮ, ತಹಶೀಲ್ದಾರ್ ಟಿ.ಎಸ್.ಶಿವರಾಜ್, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದಿಬ್ಬೂರು ಜಯಣ್ಣ, ವೃತ್ತ ಆರಕ್ಷಕ ನಿರೀಕ್ಷಕ ನವೀನ್ ಕುಮಾರ್, ನಗರಸಭೆ ಪೌರಾಯುಕ್ರ ರಮೇಶ್ ಎಸ್.ಸುಣಗಾರ್, ಕ್ಷೇತ್ರಶಿಕ್ಷಣಾಕಾರಿ ಬೈಯಪ್ಪರೆಡ್ಡಿ, ಸೇರಿದಂತೆ ವಿವಿಧ ಕನ್ನಡ ಸಂಘಟನೆಗಳ ಮುಖಂಡರು ಹಾಜರಿದ್ದರು.
ಸಮಾರಂಭಕ್ಕೂ ಮುನ್ನ ತಾಲೂಕು ಕಚೇರಿ ಆವರಣದಲ್ಲಿ ಉಪವಿಭಾಗಾಕಾರಿ ಅರುಳ್ ಕುಮಾರ್ ಧ್ವಜಾರೋಹಣವನ್ನು ನೆರವೇರಿಸಿದರು. ತಹಶೀಲ್ದಾರ್ ಟಿ.ಎಸ್.ಶಿವರಾಜ್ ಹಾಜರಿದ್ದರು.

