ದೊಡ್ಡಬಳ್ಳಾಪುರ: ರಾಜ್ಯದ ಬಹಳಷ್ಟು ಉದ್ಯೋಗಗಳು ಅನ್ಯರಾಜ್ಯದವರ ಪಾಲಾಗುತ್ತಿದ್ದು,ಶಿಕ್ಷಣ ಹಾಗೂ ಔದ್ಯೋಗಿಕ ಕ್ಷೇತ್ರಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡಬೇಕಾದ ಅಗತ್ಯವಿದೆ ಎಂದು ಕನ್ನಡ ಪಕ್ಷದ ತಾಲೂಕು ಅಧ್ಯಕ್ಷ ಸಂಜೀವ್ ನಾಯಕ್ ಹೇಳಿದರು.
ನಗರದ ಕರೇನಹಳ್ಳಿಯ ಶ್ರೀ ವರಸಿದ್ದಿ ವಿನಾಯಕ ಗೆಳೆಯರ ಸಾಂಸ್ಕೃತಿಕ ಕಲಾ ಸಂಘದ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಕನ್ನಡಿಗರು ಪ್ರತಿಯೊಂದು ಸೌಲಭ್ಯ ಪಡೆಯಲು ಹೋರಾಟ ಮಾಡುವ ವಾತಾವರಣ ಇಂದು ಸೃಷ್ಟಿಯಾಗಿರುವುದು ವಿಷಾದಕರ. ಕನ್ನಡ ಭಾಷೆಯ ವಿಚಾರದಲ್ಲಿಯೂ ಸಹ ಸರ್ಕಾರಗಳು ನಿರ್ಲಕ್ಷ್ಯ ವಹಿಸುತ್ತಿರುವ ಪರಿಣಾಮ ಇಂದು ರಾಜ್ಯದಲ್ಲಿ ಕನ್ನಡ ಶಾಲೆಗಳು ಮುಚ್ಚಿವೆ. ಇಂದಿನ ಜಾಗತೀಕರಣದ ಸಂದರ್ಭದಲ್ಲಿ ಬಹು ರಾಷ್ಟ್ರೀಯ ಕಂಪನಿಗಳು ಹಾಗೂ ಅನ್ಯ ರಾಜ್ಯದವರು ಇಲ್ಲಿನ ಜಮೀನುಗಳನ್ನು ಖರೀದಿಸಿ, ರೈತರನ್ನು ಕೂಲಿ ಕಾರ್ಮಿಕರನ್ನಾಗಿರಿಸುತ್ತಿದ್ದಾರೆ. ಕನ್ನಡದ ಕೆಲಸ ಎಂದರೆ ಬರೀ ಭಾಷೆಯ ಕೆಲಸವಲ್ಲ. ಇಲ್ಲಿನ ಜನರ ಜೀವನ ಹಸನಾಗಬೇಕು. ಕನ್ನಡವನ್ನು ಕೊಂದರೆ ನಮ್ಮ ತಾಯಿಯನ್ನು ನಾವು ಹತ್ಯೆ ಮಾಡಿದಂತೆ. ಈ ದಿಸೆಯಲ್ಲಿ ಇಂದಿನ ಮಕ್ಕಳಿಗೆ ಕನ್ನಡ ಭಾಷೆಯ ಸತ್ವವನ್ನು ಪರಿಚರಿಸಬೇಕು. ಭಾಷೆಯೊಂದಿಗೆ ನಮ್ಮ ಸಂಸ್ಕೃತಿ ಹಾಸು ಹೊಕ್ಕಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಪಕ್ಷದ ಪ್ರಧಾನ ಕಾರ್ಯದರ್ಶಿ ಡಿ.ಪಿ.ಆಂಜನೇಯ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಿ.ಶ್ರೀಕಾಂತ, ಹಿರಿಯ ವಕೀಲ ಬಿ.ಕೆ.ಜಿ. ರಾಜು,ಮುಖಂಡರಾದ ಇಂದ್ರ ಕುಮಾರ್, ವೆಂಕಣ್ಣ, ಶಿಕ್ಷಕ ಎಚ್.ಎನ ಪ್ರಕಾಶ್, ಸಂಘದ ಅಧ್ಯಕ್ಷ ಎನ್.ವೆಂಕಟೇಶ್, ಉಪಾಧ್ಯಕ್ಷ ಟಿ.ಶ್ರೀನಿವಾಸ್, ಪದಾಕಾರಿಗಳಾದ ಮುನಿರಾಜು, ಪ್ರಶಾಂತ್, ಚಿಕ್ಕ ವೆಂಕಟಪ್ಪ, ಮಹೇಶ್, ನಾಗೇಶ್, ಜಯರಾಂ ಭಾಗವಹಿಸಿದ್ದರು.

