ಬೆಂಗಳೂರು: ಮುಂದಿನ ಪೀಳಿಗೆ ಆಹಾರ ಪದ್ಧತಿಯಲ್ಲಿ ಸಮಗ್ರ ಬದಲಾವಣೆ ಮಾಡಿಕೊಳ್ಳದಿದ್ದರೆ ರೋಗಗ್ರಸ್ತ ಪೀಳಿಗೆ ಹುಟ್ಟಿಗೆ ಕಾರಣವಾಗಲಿದೆ ಎಂದು ಕೃಷಿ ಮಾರುಕಟ್ಟೆ ನಿರ್ದೇಶಕ ಸಿ.ಎಸ್ ಕರಿಗೌಡ ಕಳವಳ ವ್ಯಕ್ತಪಡಿಸಿದರು.
ಮಾಗಡಿ ತಾಲ್ಲೂಕಿನ ದೊಡ್ಡರಂಗನಪಾಳ್ಯ ಮುನಿಸ್ವಾಮಯ್ಯ ಅವರ ತೋಟದಲ್ಲಿ ’ಅರಣ್ಯ ಆಧಾರಿತ ಕೃಷಿ ಬಳಗ’ ಏರ್ಪಡಿಸಿದ್ದ ಸಂವಾದಲ್ಲಿ ಮಾತನಾಡಿದರು.
’ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಆಗಿದ್ದಾಗ ದೊಡ್ಡಬಳ್ಳಾಪುರ ಸಮೀಪದ ಗಾರ್ಮೆಂಟ್ಸ್ ಹೋಗುವ ಮಹಿಳೆಯರ ಆರೋಗ್ಯ ತಪಾಸಣೆಗೆ ಒಳಪಡಿಸಿದಾಗ ಶೇಕಡ 24 ಡಯಾಬಿಟಿಸ್, ಶೇಕಡ 23 ಅನಿಮಿಕ ಕಾಯಿಲೆಗಳಿಂದ ಮಹಿಳೆಯರು ಬಳಲುತ್ತಿದ್ದ ಆತಂಕದ ಮಾಹಿತಿ ಪತ್ತೆಯಾಯಿತು. ಇಂತಹ ಕಾಯಿಲೆಗಳನ್ನು ದೂರ ಮಾಡಲು ಹೆಚ್ಚಿನ ಪೋಷ್ಟಿಕಾಂಶ ಇರುವ ಹಸಿರು ತರಕಾರಿ, ನುಗ್ಗೆಸೊಪ್ಪು, ನುಗ್ಗೆಕಾಯಿ ಆಹಾರ ಪದ್ಧತಿ ಅಳವಡಿಸಿಕೊಳ್ಳುವಂತೆ ಅಂದಿನ ಸಂದರ್ಭದಲ್ಲಿ ಸಲಹೆ ನೀಡಿದ್ದೆ‘ ಎಂದು ಮೆಲುಕು ಹಾಕಿದರು.
ಇದೇ ಸಂದರ್ಭದಲ್ಲಿ ಕೆಎಎಸ್ ಅಧಿಕಾರಿ ಡಾ.ನೆಲ್ಲುಕುಂಟೆ ವೆಂಕಟೇಶಯ್ಯ ಮಾತನಾಡಿ, ’ಈಗಿನ ಆಹಾರ ಪದ್ಧತಿಯಲ್ಲಿ ಅಕ್ಕಿ, ಗೋಧಿ ಹಾಗೂ ಆಲೂಗೆಡ್ಡೆ ಹೆಚ್ಚಾಗಿ ಬಳಕೆ ಮಾಡುತ್ತಿದ್ದೇವೆ. ಬದಲಿಯಾಗಿ ವಿವಿಧ ರೀತಿಯ ಕಾಳು, ತರಕಾರಿ, ಸೊಪ್ಪು ಬಳಕೆ ಮಾಡುವುದರಿಂದ ಆರೋಗ್ಯವಂತ ಪೀಳಿಗೆ ಸೃಷ್ಟಿಯಾಗಲಿದೆ. ಹಳೆ ಆಹಾರ ಪದ್ಧತಿ ಅಳವಡಿಸಿಕೊಳ್ಳಬೇಕೆಂದು’ ಸಲಹೆ ನೀಡಿದರು.
ತೇಜ ನರ್ಸರಿಯ ಶಿವನಪೂರ ರಮೇಶ್ ಮಾತನಾಡಿ, ’ಆಹಾರ ಪದ್ಧತಿಯಲ್ಲಿ ಸಮಗ್ರ ಬದಲಾವಣೆ ಕಾಣಬೇಕಾದರೆ ಪ್ರತಿ ಮನೆ ಅಂಗಳದಲ್ಲೂ ಒಂದು ನುಗ್ಗೆಮರ, ಕರಿಬೇವು, ಬೆಟ್ಟದ ನೆಲ್ಲಿ ಹಾಗೂ ನಿಂಬೆಗಿಡ ನೆಡುವ ಕಾರ್ಯಕ್ರಮ ರೂಪಿಸಲು ಜನರಲ್ಲಿ ಜಾಗೃತಿ ಮೂಡಿಸಿ ಒಂದು ಹಳ್ಳಿಯನ್ನು ದತ್ತು ತೆಗೆದುಕೊಳ್ಳುವುದರ ಮೂಲಕ ಈ ಕಾರ್ಯಕ್ರಮ ಯಶಸ್ವಿಗೊಳಿಸಬೇಕು‘ಎಂದು ಹೇಳಿದರು.
ಚಿತ್ರ ನಿರ್ದೇಶಕ ಶಿವಮಣಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ಅರಣ್ಯ ಆಧಾರಿತ ಕೃಷಿ ಬಳಗದ ಸದಸ್ಯರು ಸಂವಾದಲ್ಲಿ ಪಾಲ್ಗೊಂಡಿದ್ದರು.

