ದೊಡ್ಡಬಳ್ಳಾಪುರ: ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘದ ಚುನಾವಣೆಯಲ್ಲಿ ಬಿಜೆಪಿ – ಜೆಡಿಎಸ್ ಮೈತ್ರಿಕೂಟ ಮಾಡಿಕೊಂಡು ಒಂಬತ್ತು ಜನ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ ಎಂದು ಜಿಲ್ಲಾಪಂಚಾಯಿತಿ ಸದಸ್ಯ ಹೆಚ್.ಅಪ್ಪಯ್ಯಣ್ಣ ತಿಳಿಸಿದ್ದಾರೆ.
ಈ ಮೂಲಕ ಮಂಗಳವಾರವಷ್ಟೆ ಯಾವುದೇ ಪಕ್ಷದೊಂದಿಗೆ ಮೈತ್ರಿಯಿಲ್ಲದೆ ಒಂಬತ್ತು ಮಂದಿ ಜೆಡಿಎಸ್ ಪಕ್ಷದಿಂದ ಸ್ಪರ್ಧೆಮಾಡುತ್ತಿದ್ದಾರೆ ಎಂದಿದ್ದ ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡರಿಗೆ ತಿರುಗೇಟು ನೀಡಿದ್ದು, ತಮ್ಮ ಬಣದ ಐದು ಮಂದಿಯನ್ನು ಸ್ಪರ್ಧೆಗಿಳಿಸಿರುವುದಾಗಿ ತಿಳಿಸಿದ್ದಾರೆ. ನಗರದ ಕನ್ನಡ ಜಾಗೃತ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹೆಚ್.ಅಪ್ಪಯ್ಯಣ್ಣ, ಪಕ್ಷಾತೀತ ಸಂಸ್ಥೆಯಾದ ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘಕ್ಕೆ ಸೂಕ್ತರನ್ನು ಆಯ್ಕೆ ಮಾಡುವ ಸಲುವಾಗಿ ಬಿಜೆಪಿ ಜೊತೆ ಮೈತ್ರಿ ಮಾಡಲಾಗಿದೆ.
ಜೆಡಿಎಸ್ ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿಗಳಾಗಿ ಬಿಸಿಎಂ”ಎ” ಕ್ಷೇತ್ರಕ್ಕೆ ರಾ.ಬೈರೇಗೌಡ, ಸಾಮಾನ್ಯ ಕ್ಷೇತ್ರದಿಂದ ಜಿ.ಕೆ.ದೇವರಾಜ್, ಅಶ್ವಥ್ ನಾರಾಯಣ, ಟಿ.ವಿ.ಲಕ್ಷ್ಮೀನಾರಾಯಣ್, ಪರಿಶಿಷ್ಟ ಜಾತಿ ಕ್ಷೇತ್ರದಿಂದ ಆನಂದ್, ಸಾಮಾನ್ಯ ಮಹಿಳಾ ಕ್ಷೇತ್ರಕ್ಕೆ ರತ್ನಮ್ಮ, ಉಮಾದೇವಿ, ಎ ಸ್ಥಾನಕ್ಕೆ ಪಿ.ಎಂ.ಪ್ರಕಾಶ್ ಕುಮಾರ್, ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಪ್ರೇಮ್ ಕುಮಾರ್, ಅಭ್ಯರ್ಥಿಗಳಾಗಿದ್ದಾರೆ ಎಂದರು.
ಜಿಲ್ಲಾಧ್ಯಕ್ಷ ಬಿ.ಮುನೇಗೌಡರೊಂದಿಗೆ ಹೊಂದಾಣಿಕೆ ಇಲ್ಲ: ಪಕ್ಷ ನಿಷ್ಠ ಮುಖಂಡರಿಗೆ ಈ ಚುನಾವಣೆ ಅವಕಾಶ ನೀಡಿ ಎಂದರು ಜಿಲ್ಲಾ ಅಧ್ಯಕ್ಷರು ಸ್ಪಂದಿಸಲಿಲ್ಲ. ತಾಲೂಕು ಅಧ್ಯಕ್ಷರ ಮೇಲೆ ಜಿಲ್ಲಾ ಅಧ್ಯಕ್ಷ, ಜಿಲ್ಲಾ ಅಧ್ಯಕ್ಷರ ಮೇಲೆ ತಾಲೂಕು ಅಧ್ಯಕ್ಷ ಒಬ್ಬರ ಮೇಲೆ ಒಬ್ಬರು ಹೇಳುತ್ತಾ ಕಾಲಹರಣ ಮಾಡಿದರೆ ಹೊರತು ಅನುಭವಿಗಳಿಗೆ ಅವಕಾಶ ನೀಡಲಿಲ್ಲ. ಜಿಲ್ಲಾಧ್ಯಕ್ಷರಾದಾಗಿನಿಂದಲೂ ನಮಗೂ ಅವರಿಗೆ ಹೊಂದಾಣಿಕೆ ಇಲ್ಲದ ಕಾರಣ ನಮ್ಮ ಬಣದವರು ಬಿಜೆಪಿ ಜೊತೆ ಮೈತ್ರಿಗೆ ಇಳಿದಿದ್ದಾರೆ ಎಂದ ಅವರು, ನಮ್ಮದೆ ಮೂಲ ಜೆಡಿಎಸ್ ಪಕ್ಷ ಎಂದರು.
ತೂಬಗೆರೆ ಹೋಬಳಿ ಅಧ್ಯಕ್ಷ ದೇವರಾಜ್ ಮಾತನಾಡಿ, ಚುನಾವಣೆ ಪೂರ್ವ ಸಿದ್ದತಾ ಸಭೆಯಲ್ಲಿ ಎರಡು ಬಣಗಳು ಒಂದಾಗಿ ಚುಮಾವಣೆ ಎದುರಿಸೋಣಾ ಎಂದರು ಜಿಲ್ಲಾ ಅಧ್ಯಕ್ಷರು ತಮಗೆ ಬೇಕಾದವರಿಗೆ ಮಾತ್ರ ಬೆಂಬಲ ನೀಡಿದರೆ ಹೊರತು ನಿಷ್ಟಾವಂತರಿಗೆ ಮನ್ನಣೆ ನೀಡಲಿಲ್ಲ. ಅವರಿಗೆ ಎಲ್ಲರನ್ನೂ ಒಂದಾಗಿ ತಗೆದುಕೊಂಡು ಹೋಗುವ ಮನಸ್ಥಿತಿ ಇಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನ್ಯಾಯವಾದಿ ರಾ.ಬೈರೇಗೌಡ ಮಾತನಾಡಿ, ಪಕ್ಷದ ನಿಷ್ಠಾವಂತರಿಗೆ ಮುನೇಗೌಡ ಮನ್ನಣೆ ನೀಡುತ್ತಿಲ್ಲ. ಲೋಕಸಭೆ ಚುನಾವಣೆಯಲ್ಲಿ ಒಂದು ಪಕ್ಷಕ್ಕೆ, ಹಾಲಿನ ಡೈರಿ ಚುನಾವಣೆಯಲ್ಲಿ ಒಂದು ಪಕ್ಷಕ್ಕೆ ಬೆಂಬಲ ನೀಡುವ ವ್ಯಕ್ತಿಗೆ ಬದ್ದತೆ ಎಂಬುದೇ ಇಲ್ಲವಾಗಿದೆ. ಈ ಮುನ್ನ ನಮ್ಮದೇ ಪಕ್ಷದ ಪರಿಶಿಷ್ಟ ವರ್ಗದ ಆನಂದ್ ಅಧ್ಯಕ್ಷ ಸ್ಥಾನ ದೊರಕಿಸಲು ಅಡ್ಡಿ ಉಂಟುಮಾಡಿದ ವ್ಯಕ್ತಿಯಾತ ಎಂದು ಜಿಲ್ಲಾ ಅಧ್ಯಕ್ಷ ಬಿ.ಮುನೇಗೌಡರ ವಿರುದ್ಧ ಹರಿಹಾಯ್ದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಪುಟಬಸವರಾಜು, ತಳವಾರ್ ನಾಗರಾಜು, ಬೀಡಿಕೆರೆ ಗೌರೀಶ್, ರಾಮಣ್ಣ, ಚಂದ್ರಶೇಖರ್, ಹರ್ಷ, ಕುಂಟನಹಳ್ಳಿ ಮಂಜುನಾಥ್, ದೇವರಾಜ್, ಕುಮಾರ್, ಮಂಜುನಾಥ್ ಮತ್ತಿತರಿದ್ದರು.

