ದೊಡ್ಡಬಳ್ಳಾಪುರ: ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ (ಟಿಎಪಿಎಂಸಿಎಸ್) ಚುನಾವಣ ಪ್ರಚಾರದ ಭರಾಟೆ ಜೋರಾಗಿದ್ದು ಅಭ್ಯರ್ಥಿಗಳು ಮತದಾರರ ಮನೆಗಳಿಗೆ ಭೇಟಿ ನೀಡಿ ಮತ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಜಮೀನಿನ ಪಹಣಿ ಹೊಂದಿರುವ ರೈತರು ಮಾತ್ರ ಟಿಎಪಿಎಂಸಿಎಸ್ನಲ್ಲಿ ಸದಸ್ಯತ್ವ ಹೊಂದಲು ಅರ್ಹರು. ಸದಸ್ಯತ್ವ ಹೊಂದಿರುವ ರೈತರು ಟಿಎಪಿಎಂಸಿಎಸ್ನಲ್ಲಿ ನಡೆಯುವ ಸರ್ವ ಸದಸ್ಯರ ಸಭೆಗಳಲ್ಲಿ ಕನಿಷ್ಠ ಮೂರು ಸಭೆಗಳಲ್ಲಿ ಭಾಗವಹಿಸಿದ್ದರೆ ಮಾತ್ರ ಮತ ಚಲಾಯಿಸಲು ಹಕ್ಕು ಹೊಂದಿರುತ್ತಾರೆ. ಟಿಎಪಿಎಂಸಿಎಸ್ನ 4,200 ಸದಸ್ಯರ ಪೈಕಿ 2,163 ಜನ ಸದಸ್ಯರು ಮಾತ್ರ ಮತಚಲಾಯಿಸುವ ಹಕ್ಕು ಹೊಂದಿದ್ದರು. ಸರ್ವ ಸದಸ್ಯರ ಸಭೆಗಳಲ್ಲಿ ಭಾಗವಹಿಸದೆ ಮತದಾನದ ಹಕ್ಕು ಕಳೆದುಕೊಂಡಿದ್ದವರಲ್ಲಿ 1,500 ಜನ ಸದಸ್ಯರು ನ್ಯಾಯಾಲಯದ ಮೊರೆ ಹೋಗಿ ಮತ ಚಲಾಯಿಸುವ ಹಕ್ಕು ಪಡೆದುಕೊಂಡು ಬಂದಿದ್ದಾರೆ. ಈ ಸಂಖ್ಯೆ ಇನ್ನು ಹೆಚ್ಚಾಗಲಿದೆ. 13 ಸ್ಥಾನಗಳನ್ನು ಹೊಂದಿರುವ ಟಿಎಪಿಎಂಸಿಎಸ್ನಲ್ಲಿ ‘ಎ’ತರಗತಿಯಿಂದ 4 (ವಿಎಸ್ಎಸ್ಎನ್ಗಳಿಂದ), ‘ಬಿ’ ತರಗತಿಯಿಂದ 9 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. 13 ಜನ ನಿರ್ದೇಶಕರ ಸ್ಥಾನಗಳನ್ನು ಹೊಂದಿರುವ ಟಿಎಪಿಎಂಸಿಎಸ್ನಲ್ಲಿ ‘ಎ’ ತಗತಿಯ 4 ಸ್ಥಾನಗಳಿಗೆ 7 ಜನ ಅಂತಿಮ ಕಣದಲ್ಲಿ ಉಳಿದಿದ್ದಾರೆ. ಬಿಸಿಎಂ ‘ಎ’ 1 ನಿರ್ದೇಶಕ ಸ್ಥಾನಕ್ಕೆ 4 ಜನ, ಬಿಸಿಎಂ ‘ಬಿ’ 1 ನಿರ್ದೇಶಕ ಸ್ಥಾನಕ್ಕೆ 3 ಜನ, ಮಹಿಳಾ ಅಭ್ಯರ್ಥಿಗಳಿಗೆ ಮೀಸಲಾದ 2 ನಿರ್ದೇಶಕ ಸ್ಥಾನಗಳಿಗೆ 5 ಜನ, ಸಾಮಾನ್ಯ ಅಭ್ಯರ್ಥಿಗಳಿಗೆ ಮೀಸಲಾಗಿರುವ 3 ಸ್ಥಾನಗಳಿಗೆ 9 ಜನ, ಎಸ್ಸಿ ಅಭ್ಯರ್ಥಿಗೆ ಮೀಸಲಾಗಿರುವ 1 ಸ್ಥಾನಕ್ಕೆ 4 ಜನ, ಎಸ್ಟಿ ಅಭ್ಯರ್ಥಿಗೆ ಮೀಸಲಾದ 1 ಸ್ಥಾನಕ್ಕೆ 3 ಜನ ಅಭ್ಯರ್ಥಿಗಳು ಅಂತಿಮ ಚುನಾವಣ ಕಣದಲ್ಲಿದ್ದಾರೆ. ನ.8 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮತದಾನ ನಡೆಯಲಿದ್ದು, ಅಂತಿಮ ಚುನಾವಣ ಕಣದಲ್ಲಿ 35 ಜನ ಅಭ್ಯರ್ಥಿಗಳು ಉಳಿದಿದ್ದಾರೆ.
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಮತ ನೀಡಿ: ಶಾಸಕ ಟಿ.ವೆಂಕಟರಮಣಯ್ಯ ಟಿಎಪಿಎಂಸಿಎಸ್ ಆರ್ಥಿಕ ಅಭಿವೃದ್ಧಿಗೆ ಬಹಳಷ್ಟು ಕ್ರಮಕೈಗೊಂಡಿದ್ದು, ಮತದಾರರು ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳಿಗೆ ಮತ ನೀಡುವಂತೆ ಮನವಿ ಮಾಡಿದ್ದಾರೆ. 2013 ರಿಂದ 2018ರ ವರೆಗೆ ಟಿಎಪಿಎಂಸಿಎಸ್ ಆರ್ಥಿಕವಾಗಿ ಅಭಿವೃದ್ಧಿಗೊಳಿಸಲು ನಗರಸಭೆಯಿಂದ 200×400 ನಿವೇಶನ ಖಾತೆ ಮಾಡಿಸಿ ಕಟ್ಟಡ ನಿರ್ಮಿಸಲು ಅನುಕೂಲ ಮಾಡಿಕೊಟ್ಟು ಸುಮಾರು 2.5ಲಕ್ಷ ಬಾಡಿಗೆ ಬರುವಂತಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ 30 ನ್ಯಾಯಬೆಲೆ ಅಂಗಡಿ ತೆರೆದು ಅದರ ಮೂಲಕ ವರಮಾನ ಹೆಚ್ಚಿಸಲು ಕ್ರಮ, ಅನೇಕ ವರ್ಷಗಳಿಂದ ಬೇಜವಬ್ದಾರಿಯಿಂದ ವರ್ತಿಸುತ್ತಿದ್ದ ಅಧಿಕಾರಿಯ ವರ್ಗಾವಣೆ ಮಾಡಿ ಸಂಘದಲ್ಲಿ ಶಿಸ್ತುತರಲು ಕ್ರಮ, ಜನತಾ ಬಜಾರ್ ಗಳ ಸ್ಥಾಪನೆ ಸೇರಿದಂತೆ ಅನೇಕ ಕ್ರಮಗಳನ್ನು ಕೈಗೊಂಡಿದ್ದು, ಕಾಂಗ್ರೆಸ್ ಪಕ್ಷದ ಅಭಿವೃದ್ಧಿ ಕಾರ್ಯಗಳಿಗೆ ಮನ್ನಣೆ ನೀಡುವಂತೆ ಮನವಿ ಮಾಡಿದ್ದಾರೆ.
ಬಹಿರಂಗವಾದ ಭಿನ್ನಮತ: ಟಿಎಪಿಎಂಸಿಎಸ್ ಚುನಾವಣೆ ಜೆಡಿಎಸ್ ಪಕ್ಷದ ಒಳಗೆ ಇದ್ದೆ ಭಿನ್ನಮತ ಈಗ ಬಹಿರಂಗವಾಗಿದೆ. ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ.ಮುನೇಗೌಡ ಅವರು ಎಲ್ಲಾ 9 ಸ್ಥಾನಗಳಿಗು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳನ್ನು ಚುನಾವಣ ಕಣಕ್ಕೆ ಇಳಿಸಿದ್ದಾರೆ. ಆದರೆ ಜೆಡಿಎಸ್ ಮುಖಂಡ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಅಪ್ಪಯ್ಯ ಅವರು ಐದು ಸ್ಥಾನಗಳಿಗೆ ಮಾತ್ರ ಜೆಡಿಎಸ್ ಪಕ್ಷ ಬೆಂಬಲಿತ ಅಭ್ಯರ್ಥಿಗಳನ್ನು ಚುನಾವಣ ಕಣಕ್ಕೆ ಇಳಿಸಿದ್ದು, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ನಾಲ್ಕು ಸ್ಥಾನಗಳನ್ನು ಬಿಟ್ಟುಕೊಟ್ಟಿದ್ದಾರೆ.
ಮೈತ್ರಿಗೆ ಇಳಿದ ಬಿಜೆಪಿ: ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿದ್ದರು ಸಹ ದೊಡ್ಡಬಳ್ಳಾಪುರ ಕ್ಷೇತ್ರದ ಮಟ್ಟಿಗೆ ಸಮರ್ಥ ನಾಯಕತ್ವದ ಕೊರತೆಯಿಂದಾಗಿ ಟಿಎಪಿಎಂಸಿಎಸ್ ನಂತಹ ತಾಲ್ಲೂಕಿನ ಪ್ರಮುಖ ಸಹಕಾರಿ ಸಂಸ್ಥೆಯ ಎಲ್ಲಾ 13 ಸ್ಥಾನಗಳಿಗು ಸ್ಪರ್ಧಿಸುವ ಅಭ್ಯರ್ಥಿಗಳ ಕೊರತೆ ಎದುರಾಗಿದೆ. ಸದಸ್ಯರು ಮತಚಲಾಯಿಸುವ ‘ಬಿ’ ತರಗತಿಯ 9 ಸ್ಥಾನಗಳಿಗೂ ಸಹ ಸ್ಪರ್ಧಿಸುವ ಅಭ್ಯರ್ಥಿಗಳ ಕೊರತೆಯಿಂದಾಗಿ ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು 4 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳುವಂತ ಸ್ಥಿತಿಗೆ ತಲುಪಿದೆ.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ

