ಬೆಂಗಳೂರು: ಗ್ರಾಮಾಂತರ ಜಿಲ್ಲೆಯಲ್ಲಿ 2020ರ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಯನ್ನು ಜಿ.ಪಿ.ಎಸ್. ಆಧಾರಿತ ಮೊಬೈಲ್ ಆ್ಯಪ್ ಬಳಸಿ ಪೂರ್ಣಗೊಳಿಸಲಾಗಿದ್ದು, ಬೆಳೆಗಳ ಪೊೊಟೋ ಆಪ್‍ಲೋಡ್ ಮಾಡಿರುವುದರಲ್ಲಿ ಯಾವುದೇ ಲೋಪದೋಷಗಳು ಕಂಡು ಬಂದಲ್ಲಿ “ಬೆಳೆದರ್ಶಕ್ 2020” ಆ್ಯಪ್‍ನಲ್ಲಿ ಆಕ್ಷೇಪಣೆಗಳನ್ನು ಸಲ್ಲಿಸಲು 2020ರ ನವೆಂಬರ್ 15 ರವರೆಗೆ ಅವಧಿ ವಿಸ್ತರಿಸಲಾಗಿದೆ.
ಬೆಳೆ ಸಮೀಕ್ಷೆ ಮೂಲಕ ಸಂಗ್ರಹಿಸಿದ ಬೆಳೆ ಮಾಹಿತಿಯ ಮೇಲ್ವಿಚಾರಕರ ಮೂಲಕ ಅನುಮೋದನೆ ಮಾಡಿದ ನಂತರ ಈ ಮಾಹಿತಿಯನ್ನು ಬೆಂಬಲ ಬೆಲೆಯಲ್ಲಿ ಕೃಷಿ ಉತ್ಪನ್ನಗಳ ಖರೀದಿಗಾಗಿ, ಬೆಳೆ ವಿಮೆ ಯೋಜನೆಗಾಗಿ, ಬೆಳೆ ನಷ್ಟ ಪರಿಹಾರ ನೀಡುವ ಸಮಯದಲ್ಲಿ ಉಪಯೋಗಿಸಲಾಗುತ್ತದೆ. ಆದ್ದರಿಂದ ರೈತರು ತಮ್ಮ ಜಮೀನುಗಳಲ್ಲಿ ಬೆಳೆದಿರುವ ಬೆಳೆಗಳನ್ನು ಸರಿಯಾಗಿ ನಮೂದಿಸಲಾಗಿದೆಯೇ ಎಂಬುದನ್ನು “ಬೆಳೆದರ್ಶಕ್ 2020” ಎಂಬ ಆ್ಯಪ್‍ನ್ನು ಪ್ಲೇ ಸ್ಟೋರ್‍ನಲ್ಲಿ ಡೌನ್‍ಲೋಡ್ ಮಾಡಿಕೊಂಡು ನೋಡಬಹುದಾಗಿರುತ್ತದೆ. ಬೆಳೆಗಳ ಪೋಟೋ ಆಪ್‍ಲೋಡ್ ಮಾಡಿರುವುದರಲ್ಲಿ ಯಾವುದೇ ಲೋಪದೋಷಗಳು ಕಂಡು ಬಂದಲ್ಲಿ “ಬೆಳೆದರ್ಶಕ್ 2020” ಆ್ಯಪ್‍ನಲ್ಲಿ ಆಕ್ಷೇಪಣೆಗಳನ್ನು ಸಲ್ಲಿಸಲು 2020ರ ನವೆಂಬರ್ 15 ಕೊನೆಯ ದಿನವಾಗಿರುತ್ತದೆ.
ಬೆಳೆ ದರ್ಶಕ್ ಆ್ಯಪ್‍ನ ವೈಶಿಷ್ಯತೆಗಳು: ನಿಮ್ಮ ಜಮೀನಿನಲ್ಲಿ ಬೆಳೆ ಸಮೀಕ್ಷೆ ಪ್ರಕಾರ ದಾಖಲಾಗಿರುವ ಬೆಳೆ ವಿವರಗಳು ಮತ್ತು ವಿಸ್ತೀರ್ಣದ ಮಾಹಿತಿ ಪಡೆಯುಬಹುದು, ಬೆಳೆ ಸಮೀಕ್ಷೆ ಸಮಯದಲ್ಲಿ ನಿಮ್ಮ ಜಮೀನಿನಲ್ಲಿ ತೆಗೆಯಲಾದ ಜಿಪಿಎಸ್ ಆಧಾರಿತ ಛಾಯಾ ಚಿತ್ರಗಳನ್ನು ವೀಕ್ಷಿಸಬಹುದು, ನಿಮ್ಮ ಜಮೀನಿನ ಬೆಳೆ ಸಮೀಕ್ಷೆ ಮಾಡಿದವರ ಹೆಸರು ಮತ್ತು ಮೊಬೈಲ್ ಸಂಖ್ಯೆಯ ವಿವರ ಪಡೆಯಬಹುದು, ನೀವು ಬೆಳೆ ಸಮೀಕ್ಷೆ ಪ್ರಕಾರ ದಾಖಲಿಸಿದ ಮಾಹಿತಿಯನ್ನು ಮೇಲ್ವಿಚಾರಣೆ ಮಾಡುವ ಅಧಿಕಾರಿಗಳು ಅಂಗೀಕರಿಸಿದ್ದಾರೋ ಇಲ್ಲವೋ ಎಂದು ಷರಾ ಕಾಲಂನಲ್ಲಿ ತಿಳಿಯಬಹುದು, ಬೆಳೆ ಸಮೀಕ್ಷೆ ವಿವರ ತಪ್ಪಾಗಿ ದಾಖಲಾಗಿದ್ದಲ್ಲಿ ಆಕ್ಷೇಪಣೆ ಸಲ್ಲಿಸಬಹುದು, ಮೇಲ್ವಿಚಾರಣೆ ಮಾಡುವ ಸರ್ಕಾರಿ ಅಧಿಕಾರಿಗಳು ಆಕ್ಷೇಪಣೆ ಕುರಿತು ಏನು ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಯಬಹುದು.
ಈ ರೀತಿಯಾಗಿ ದಾಖಲಾಗಿರುವ ಎಲ್ಲಾ ಆಕ್ಷೇಪಣೆಗಳನ್ನು ಸಂಬಂಧಪಟ್ಟ ಮೇಲ್ವಿಚಾರಕರಿಗೆ ತಂತ್ರಾಂಶದಲ್ಲಿ ಗುರುತಿಸಲಾಗುತ್ತದೆ. ಮೇಲ್ವಿಚಾರಕರು ಆಕ್ಷೇಪಣೆಗಳನ್ನು ಪರಿಶೀಲಿಸಿ ಅವುಗಳನ್ನು ತುರ್ತಾಗಿ ಇತ್ಯರ್ಥ ಪಡಿಸುವರು. ಮೇಲ್ವಿಚಾರಕರು ಸ್ವೀಕೃತವಾಗಿರುವ ಪ್ರತಿಯೊಂದು ಆಕ್ಷೇಪಣೆಯನ್ನು ಕೂಲಂಕುಶವಾಗಿ ಪರಿಶೀಲಿಸಿ, ಈಗಾಗಲೇ ಬೆಳೆ ಸಮೀಕ್ಷೆ ದತ್ತಾಂಶದಲ್ಲಿ ಲಭ್ಯವಿರುವ ಬೆಳೆ ಮಾಹಿತಿಯೊಂದಿಗೆ ಹೋಲಿಸಿ ಆಕ್ಷೇಪಣೆಗಳನ್ನು ಇತ್ಯರ್ಥ ಪಡಿಸುವರು. ಬೆಳೆ ಸಮೀಕ್ಷೆ ದತ್ತಾಂಶದಲ್ಲಿ ಲಭ್ಯವಿರುವ ಬೆಳೆ ಮಾಹಿತಿಯ ಆಧಾರದ ಮೇರೆಗೆ ಇತ್ಯರ್ಥ ಪಡಿಸಲು ಸಾಧ್ಯವಿಲ್ಲದ ಸನ್ನಿವೇಶದಲ್ಲಿ ಮೇಲ್ವಿಚಾರಕರೇ ಖುದ್ದಾಗಿ ಮಹಜರು ದಾಖಲಿಸುವ ಮೂಲಕ ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಲಾಗುವುದೆಂದು ಆಕ್ಷೇಪಣೆಗಳನ್ನು ಸಲ್ಲಿಸಲು ಕೃಷಿ ಇಲಾಖೆಯ ಬೆಂಗಳೂರು ಗ್ರಾಮಾಂತರ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ

