ಬೆಂಗಳೂರು: ತಮ್ಮ ನಾಯಕತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸತತ ಎಂಟು ಆವೃತ್ತಿಗಳಿಂದ ಐಪಿಎಲ್ ಟ್ರೋಫಿ ಗೆದ್ದುಕೊಡುವಲ್ಲಿ ವಿಫಲರಾಗಿರುವ ವಿರಾಟ್ ಕೊಹ್ಲಿಯನ್ನು ನಾಯಕತ್ವದಿಂದ ತೆಗೆದುಹಾಕಿ ಎಂದು ಗೌತಮ್ ಗಂಭೀರ್ ಆಗ್ರಹಿಸಿದ್ದಾರೆ.
ಕಳೆದ ರಾತ್ರಿ ನಡೆದ ಹದಿಮೂರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಸುತ್ತಿನಿಂದ ಆರ್ ಸಿಬಿ ಹೊರ ಬೀಳುತ್ತಿದ್ದಂತೆ ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್ಮನ್ ಗೌತಮ್ ಗಂಭೀರ್, ಆರ್ಸಿಬಿ ನಾಯಕತ್ವದಿಂದ ವಿರಾಟ್ ಕೊಹ್ಲಿಯನ್ನು ಕಿತ್ತು ಹಾಕಿ ಎಂದು ಇಎಸ್ಪಿಎನ್ ಕ್ರಿಕ್ಇನ್ಫೊ ಮೂಲಕ ಗಂಭೀರ್ ಒತ್ತಾಯಿಸಿದ್ದಾರೆ.
ಶುಕ್ರವಾರ ನಡೆದ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6 ವಿಕೆಟ್ಗಳಿಂದ ಸೋಲು ಅನುಭವಿಸಿದ ಬೆನ್ನಲ್ಲೆ ಪ್ರತಿಕ್ರಿಯಿಸಿದ ಗಂಭೀರ್, ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಯಶಸ್ವಿ ನಾಯಕರಾದ ಧೋನಿ ಹಾಗೂ ರೋಹಿತ್ ಶರ್ಮಾ ಅವರ ಸಾಲಿನಲ್ಲಿ ವಿರಾಟ್ ಕೊಹ್ಲಿಯನ್ನು ಸೇರಿಸಲು ಸಾಧ್ಯವಿಲ್ಲ. ಆರ್ಸಿಬಿ ನಾಯಕತ್ವ ವಹಿಸಿಕೊಂಡ 8 ವರ್ಷಗಳಲ್ಲಿ ಕೊಹ್ಲಿ ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ. ಐಪಿಎಲ್ ಟ್ರೋಫಿ ಗೆಲ್ಲದ ಒಬ್ಬ ನಾಯಕ ಎಂಟು ವರ್ಷಗಳ ಕಾಲ ಒಂದೇ ಫ್ರಾಂಚೈಸಿಯಲ್ಲಿ ಮುಂದುವರಿಯಬಹುದೇ..? ಎಂದು ಗೌತಮ್ ಗಂಭೀರ್ ಪ್ರಶ್ನೆ ಮಾಡಿದ್ದಾರೆ.
ಆರ್ಸಿಬಿ ಇದುವರೆಗೂ ಪ್ರಶಸ್ತಿ ಗೆಲ್ಲದ ಬಗ್ಗೆ ವಿರಾಟ್ ಕೊಹ್ಲಿಯನ್ನು ಹೊಣೆಗಾರರನ್ನಾಗಿ ಮಾಡಬೇಕೆಂದು ಒತ್ತಾಯಿಸಿರುವ ಅವರು, ಎರಡು ಆವೃತ್ತಿಗಳಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಅತ್ಯುತ್ತಮವಾಗಿ ಮುನ್ನಡೆಸಿದ್ದರೂ ಆರ್. ಅಶ್ವಿನ್ ಅವರನ್ನು ನಾಯಕತ್ವದಿಂದ ಕೆಳಗೆ ಇಳಿಸಲಾಯಿತು. ಆದರೆ, ಸತತ ಎಂಟು ವರ್ಷಗಳಿಂದ ಕೊಹ್ಲಿ ನಾಯಕತ್ವದ ವೈಫಲ್ಯತೆ ವಿಷಯವಾಗಿ ಏಕೆ ಈ ಕ್ರಮ ಜರುಗಿಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ಗೆದ್ದಾಗ ನೀವು ಕ್ರೆಡಿಟ್ ಪಡೆವ ಕೋಯ್ಲಿ ಸೋತಾಗ ಟೀಕೆಗಳನ್ನು ಸ್ವೀಕರಿಸಬೇಕು. ಸತತ ನಾಲ್ಕು ಸೋಲುಗಳ ನಂತರ ಆರ್ಸಿಬಿ ಪ್ಲೇಆಫ್ಗೆ ಅರ್ಹತೆ ಪಡೆದು ಎಲಿಮಿನೇಟರ್ ಪಂದ್ಯದಲ್ಲಿ ಸೋತಿದೆ. ಆರ್ಸಿಬಿ ಕೊಹ್ಲಿ ಮತ್ತು ಡಿವಿಲಿಯರ್ಸ್ರನ್ನು ಹೆಚ್ಚು ಅವಲಂಬಿಸಿದೆ. ಆರ್ಸಿಬಿ ಪರ ಎಬಿ ಡಿವಿಲಿಯರ್ಸ್ ಕೆಲವು ಪಂದ್ಯಗಳಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ತೋರಿದ್ದಾರೆ. ಇವರಿಗೆ ಇನ್ನುಳಿದ ಆಟಗಾರರೂ ಸಾಥ್ ನೀಡಬೇಕಾಗುತ್ತದೆ ಎಂದು ಗೌತಮ್ ಗಂಭೀರ್ ತಿಳಿಸಿದ್ದಾರೆ.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ

