ದೊಡ್ಡಬಳ್ಳಾಪುರ: ಮೋಪರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ ಮತ್ತು ಬಾಶೆಟ್ಟಿಹಳ್ಳಿಯ ಪಶು ಚಿಕಿತ್ಸಾಲಯ ಸಹಯೋಗದಲ್ಲಿ ಕಾಲು ಬಾಯಿ ರೋಗ ಲಸಿಕಾ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಪಶುಪಾಲನೆ ಮತ್ತು ಪಶು ವೈದ್ಯ ವಿಭಾಗದ ಸಹಾಯಕ ನಿರ್ದೇಶಕ ಡಾ.ರಾಜೇಂದ್ರ ಉದ್ಘಾಟಿಸಿದರು.
ಈ ವೇಳೆ ಮಾತಾನಾಡಿದ ಅವರು, ಕಾಲು ಬಾಯಿ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ರಾಸುಗಳಿಗೆ ಲಸಿಕೆಯನ್ನು ಹಾಕುವುದರಿಂದ ಕಾಲು ಬಾಯಿ ರೋಗವನ್ನು ಸಂಪೂರ್ಣವಾಗಿ ತಡೆಗಟ್ಟಬಹುದು. ರೋಗ ಗ್ರಸ್ತ ರಾಸುಗಳನ್ನು ಆರೋಗ್ಯವಂತ ದನಗಳಿಂದ ಬೇರ್ಪಡಿಸಿ ಕೂಡಲೇ ಪಶು ವೈದ್ಯರಿಂದ ಸೂಕ್ತ ಚಿಕಿತ್ಸೆಗೆ ಒಳಪಡಿಸಬೇಕು, ರಾಸುಗಳನ್ನು ಸಾಕುವವರು ಸಾಧ್ಯವಾದರೆ ಸೊಳ್ಳೆ ಪರದೆಗಳನ್ನು ಬಳಸಬೇಕು ಎಂದು ರೈತರಿಗೆ ಸಲಹೆ ನೀಡಿದರು.
ಪಶು ಚಿಕಿತ್ಸಾಲಯ ಬಾಶೆಟ್ಟಿಹಳ್ಳಿ ವಿಭಾಗದ ಡಾ.ರಾಜೇಶ್ ಮಾತನಾಡಿ, ರಾಸುಗಳ ಗಾಯಗಳ ಸೂಕ್ತ ಉಪಚಾರದ ಜೊತೆಯಲ್ಲಿ ಖನಿಜ ಮಿಶ್ರಣ ರೋಗ ನಿರೋಧಕ ಶಕ್ತಿ ವೃದ್ಧಿಸುವ ಔಷಧಿಗಳನ್ನು ಬಳಸುವುದರಿಂದ ಜಾನುವಾರುಗಳು ನಿಶ್ಯಕ್ತವಾಗುವುದನ್ನು ತಪ್ಪಿಸಬಹುದು ಎಂದರು.
ಮೋಪರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಮುಖ್ಯಕಾರ್ಯನಿರ್ವಾಹಕ ಡಾ.ಎಂ.ಚಿಕ್ಕಣ್ಣ ಮಾತನಾಡಿ, ರೈತರು ರಾಸುಗಳಿಗೆ ಲಸಿಕೆ ಹಾಕಿಸಿಕೊಳ್ಳುವುದರಿಂದ ರಾಸುಗಳಲ್ಲಿನ ಹಾಲಿನ ಪ್ರಮಾಣ ಕಡಿಮೆ ಆಗುವುದಿಲ್ಲ, ಪ್ರತಿಯೊಂದು ರಾಸುವಿಗೂ ಲಸಿಕೆ ಹಾಕಿಸಿಕೊಳ್ಳಿ, ಮಳೆಗಾಲದಲ್ಲಿ ಕಾಲು ಬಾಯಿ ರೋಗ ಹರಡುವ ಸಂಭವ ಇರುತ್ತದೆ, ಆದ್ದರಿಂದ ರೈತರು ಉಚಿತವಾಗಿ ಸಿಗುವಂತಹ ಈ ರೀತಿಯ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಮುಂದೆ ಆಗಬಹುದಾದ ತೊಂದರೆಗಳಿಂದ ತಪ್ಪಿಸಿಕೊಳ್ಳಿ ಎಂದರು.
ಈ ಅಭಿಯಾನದಲ್ಲಿ ಬಾಶೆಟ್ಟಿಹಳ್ಳಿ ಪ್ರಾಥಮಿಕ ಪಶು ಚಿಕಿತ್ಸಾಲಯದ ಹಿರಿಯ ಪಶು ವೈದ್ಯಕೀಯ ಪರೀಕ್ಷಕ ಕೆ ಎಸ್ ಚಂದ್ರಶೇಖರ್, ಕೆ.ಎಂ.ಎಫ್ ಸಿಬ್ಬಂದಿ ನಾಗೇಶ್, ನಾಗದೇನಹಳ್ಳಿ ಡೇರಿ ಮಾಜಿ ಅಧ್ಯಕ್ಷ, ರಾಜಶೇಖರ್, ಹಾಲು ಪರೀಕ್ಷಕ ಶರಣ್ ರಾಜ್, ನಿರ್ದೇಶಕ ಹನುಮಂತಗೌಡ ಮತ್ತಿತರಿದ್ದರು.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ

