ದೊಡ್ಡಬಳ್ಳಾಪುರ: ನಗರದ ಬಸವ ಭವನದ ಬಳಿಯಿರುವ ಜೆಡಿಎಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯ ವೇಳೆ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಬಿ.ಮುನೇಗೌಡ ಮತ್ತು ನಗರಸಭೆ ಮಾಜಿ ಸದಸ್ಯ ಶಿವಕುಮಾರ್ ನಡುವೆ ಮಾತಿನ ಚಕಮಕಿ ನಡೆಯಿತು.
ಟಿಎಪಿಎಂಸಿಎಸ್ ಚುನಾವಣೆ ಫಲಿತಾಂಶದ ಕುರಿತು ನಡೆಸಲಾಗುತ್ತಿದ್ದ ಪತ್ರಿಕಾಗೋಷ್ಠಿಯಲ್ಲಿ. ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿದ್ದಾರೆ, ಮಂಜಿನಂತೆ ಕರಗಿಸುತ್ತೇವೆ ಎಂದು ಸುತ್ತಿಬಳಸಿ ಮಾತನಾಡುತ್ತ ಕಠಿಣ ಕ್ರಮದ ಕುರಿತು ಮಾತನಾಡದ ಮುನೇಗೌಡರ ವಿರುದ್ದ ಸಿಡಿದ ಶಿವಕುಮಾರ್ ಪಕ್ಷದ ವಿರೋಧಿ ಚಟುವಟಿಕೆ ನಡೆಸಿದರೆ ಕಠಿಣ ಕ್ರಮಕೈಗೊಳ್ತಿವಿ ಅಂತ ನೇರವಾಗೆ ಹೇಳ್ರಿ. ಸರಿಯಾಗಿ ಮಾತಾಡಿ ಎಂದು ತರಾಟೆಗೆ ತಗೆದುಕೊಂಡರು. ಈ ವೇಳೆ ವಿಚಲಿತರಾದ ಮುನೇಗೌಡ, ನೀ ಎನ್ ಮಾತಾಡ್ತಾ ಇದ್ದಿಯೋ ನಿಂಗೆ ಗೊತ್ತಿಲ್ಲ ಸುಮ್ನಿರಯ್ಯ ಎಂದರು. ಇದಕ್ಕೆ ಉತ್ತರಿಸಿದ ಶಿವಕುಮಾರ್ ಕಠಿಣ ಕ್ರಮಕೈಗೊಳ್ಳುವ ದೃಢ ನಿರ್ಧಾರದ ಹೊರತು ಪಕ್ಷ ಸದೃಢವಾಗದು ಎಂದು ಉತ್ತರಿಸಿದರು, ಈ ವೇಳೆ ಸ್ಥಳದಲ್ಲಿದ್ದ ಮುಖಂಡರು ಇಬ್ಬರನ್ನು ಸುಮ್ಮನಿರಿಸಿದರು. ಇದಕ್ಕು ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುನೇಗೌಡ, ಜೆಡಿಎಸ್ ತೆಕ್ಕೆಯಲ್ಲಿದ್ದರೆ ಮಾತ್ರ ಗೆಲುವು ಎಂಬುದು ಬಂಡಾಯವೆದ್ದು ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡವರಿಗೆ ಮನವರಿಕೆಯಾಗಿದೆ ಎಂದು ಜಿಲ್ಲಾಪಂಚಾಯಿತಿ ಸದಸ್ಯ ಹೆಚ್.ಅಪ್ಪಯಣ್ಣರ ಬಣಕ್ಕೆ ಕಿಚಾಯಿಸಿದರು. ಅಲ್ಲದೆ ಈ ಹಿಂದೆ ಜೆಡಿಎಸ್ ನಿಂದ ಹೊರಹೋಗಿದಕ್ಕೆ ನನಗೂ ಸೋಲಾಗಿದ್ದು ಜೆಡಿಎಸ್ ತೆಕ್ಕೆಯಲ್ಲಿದ್ದಿದ್ದರೆ ನಾನೂ ಗೆಲುತ್ತಿದ್ದೆ ಎಂದು ಮನವರಿಯಾಗಿದೆ ಎಂದರು.ತಾಲೂಕಿನಲ್ಲಿ ಜೆಡಿಎಸ್ ಪಕ್ಷ ಸದೃಢವಾಗಿದೆ ಎಂಬುದನ್ನು ಈ ಚುನಾವಣೆ ತೋರಿಸಿದ್ದು, ಬಿಜೆಪಿಗೆ ನೆಲೆ ಇಲ್ಲವೆಂದು ಸಾರಿದೆ. ಅಲ್ಲದೆ ಕಾಂಗ್ರೆಸ್ ಕೇವಲ ತಂತ್ರ ನಡೆಸುತ್ತಾ ಗೆಲ್ಲುತ್ತಿದೆ ಎಂದರು. ದೊಡ್ಡಬಳ್ಳಾಪುರದಲ್ಲಿ ಜೆಡಿಎಸ್ ಗೆಲ್ಲಲು ಅಪ್ಪಯಣ್ಣ ಅಡ್ಡಿ: ತಾಲೂಕಿನಲ್ಲಿ ಜೆಡಿಎಸ್ ಬಲಿಷ್ಠವಾದರೂ ದೇವನಹಳ್ಳಿ ಕ್ಷೇತ್ರದ ಅಪ್ಪಯಣ್ಣರಿಗೆ ದೊಡ್ಡಬಳ್ಳಾಪುರದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದು ಬೇಕಿಲ್ಲ, ಈ ಹಿಂದೆ ಬಿಜೆಪಿಯ ನರಸಿಂಹಸ್ವಾಮಿಯವರೇ ನನಗೆ ಹೇಳಿದ್ದರು, ಅಪ್ಪಯಣ್ಣ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲು ಬಿಡಲ್ಲ ಎಂದಿದ್ದಾರೆ ಎಂದು ಆರೋಪಿಸಿದರು.ಅಲ್ಲದೆ ಅಪ್ಪಯಣ್ಣರಿಗೆ ದೇವನಹಳ್ಳಿಯಲ್ಲಿ ಜೆಡಿಎಸ್ ಅಧಿಕಾರದಲ್ಲಿ ಇರಬೇಕು, ದೊಡ್ಡಬಳ್ಳಾಪುರದಲ್ಲಿ ಅಧಿಕಾರದಲ್ಲಿ ಇರಬಾರದು ಎಂಬ ನಿಲುವು, ಅವರು ಲೆಕ್ಕಕ್ಕಿಲ್ಲದ ಮನುಷ್ಯ ಆತನ ವಿರುದ್ದ ಯಾವ ಕ್ರಮ ಕೈಗೊಳ್ಳಬೇಕು ಎಂದರು.
ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿರುವವರ ವಿರುದ್ಧ ಕ್ರಮಕ್ಕೆ ಜೆಡಿಎಸ್ ವರಿಷ್ಠರಿಗೆ ಪತ್ರ: ಟಿಎಪಿಎಂಸಿಎಸ್ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ, ತಾಲೂಕು ಅಧ್ಯಕ್ಷರ ಅನುಮತಿ ಪಡೆಯದೆ ಬಿಜೆಪಿ ಪಕ್ಷದೊಂದಿಗೆ ಅಪವಿತ್ರ ಮೈತ್ರಿ ಮಾಡಿಕೊಂಡು ಪಕ್ಷವಿರೋಧಿ ಚಟುವಟಿಕೆ ನಡೆಸಿದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಜೆಡಿಎಸ್ ವರಿಷ್ಠರಿಗೆ ಪತ್ರದ ಮೂಲಕ ಮನವಿ ಮಾಡುತ್ತೇವೆ, ಇಂತಹ ಪಕ್ಷ ವಿರೋಧಿ ನೀತಿಯಿಂದ ಪಕ್ಷಕ್ಕೆ ಹಿನ್ನಡೆಯಾಗುತ್ತಿದೆ ಎಂದು ಗಮನಕ್ಕೆ ತರಯತ್ತೇವೆ ಎಂದು ಜೆಡಿಎಸ್ ಕಾನೂನು ಘಟಕದ ಅಧ್ಯಕ್ಷ ಅಂಜನಗೌಡ ತಿಳಿಸಿದರು. ಈ ಚುನಾವಣೆಯ ಫಲಿತಾಂಶ ರಾಷ್ಟ್ರೀಯ ಪಕ್ಷವಾದ ಬಿಜೆಪಿ ತಾಲೂಕಿನಲ್ಲಿ ಹೀನಾಯ ಸ್ಥಿತಿತಲುಪಿದೆ ಎಂದು ಸಾರುತ್ತಿದೆ. ಜೆಡಿಎಸ್ ಅಭ್ಯರ್ಥಿಗಳನ್ನು ಸೋಲಿಸಲು ಮಾಡಿದ ಒಳಸಂಚನ್ನು ಮತದಾರರು ವಿಫಲಗೊಳಿಸಿದ್ದಾರೆ. ಒಂಬತ್ತು ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿತ್ತು ಆದರೆ ಈ ಬಿಜೆಪಿ ಜೊತೆ ಮೈತ್ರಿ ಪದ ಬಳಕೆ ಮಾಡಿದ ಒಳಸಂಚಿನ ಕಾರಣ ಹಿನ್ನಡೆಯಾಯಿತು, ಆದರೂ ಸೋತವರಿಗೂ ಮನ್ನಣೆ ನೀಡಿ ಪಕ್ಷಕಟ್ಟುವ ಕೆಲಸ ಮಾಡುತ್ತೇವೆ ಎಂದರು.
ಇದೇ ವೇಳೆ ನೂತನವಾಗಿ ಟಿಎಪಿಎಂಸಿಎಸ್ ಚುನಾವಣೆಯಲ್ಲಿ ಆಯ್ಕೆಯಾದ ಕೆ.ಸಿ.ಲಕ್ಷ್ಮೀನಾರಾಯಣ, ವಿ.ಅಂಜನೇಗೌಡ, ಗೋವಿಂದರಾಜ್, ಚಂದ್ರಕಲಾ, ಲಕ್ಷ್ಮೀ ಅವರನ್ನು ಸನ್ಮಾನಿಸಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಅಧ್ಯಕ್ಷ ಎಂ.ಲಕ್ಷ್ಮೀಪತಯ್ಯ, ನಗರ ಅಧ್ಯಕ್ಷ ವಡ್ಡರಹಳ್ಳಿ ರವಿಕುಮಾರ್, ಕಾರ್ಯಾಧ್ಯಕ್ಷ ಆರ್.ಕೆಂಪರಾಜ್, ಮುಖಂಡರಾದ ಗೋವಿಂದರಾಜ್, ರಮೇಶ್, ಅಖಿಲೇಶ್, ವೆಂಕಟರಮಣಪ್ಪ, ಸಿದ್ದಪ್ಪ, ಮುನಿರಾಜು, ಮಂಜುನಾಥ್, ನಾಗೇಶ್, ಕುಮಾರ್ ಮತ್ತಿತರಿದ್ದರು.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ

