ಚಿಕ್ಕಬಳ್ಳಾಪುರ: ಕುರಿ ಮೇಯಿಸಲು ಹೋಗಿದ್ದ ಇಬ್ಬರು ಮಕ್ಕಳು ನೀರು ಪಾಲಾದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಬಚ್ಚನಹಳ್ಳಿಯ ಬಳಿ ನಡೆದಿದೆ.
ಮೃತರನ್ನು ದರ್ಶನ್ (15) ಮತ್ತು ಶಿವ(14) ಎಂದು ಗುರುತಿಸಲಾಗಿದೆ. ದಿಬ್ಬೂರಹಳ್ಳಿ ಗ್ರಾಮದ ಮೂರ್ತಿ ಹಾಗೂ ನಾಗಮಣಿ ದಂಪತಿಗಳ ಮಗ ದರ್ಶನ್ 10 ನೇ ತರಗತಿ ಹಾಗೂ ಇದೇ ತಾಲ್ಲೂಕಿನ ಕಾಚಹಳ್ಳಿ ಗ್ರಾಮದ ಮಂಜುನಾಥ ಮತ್ತು ಗಂಗರತ್ನಮ್ಮ ದಂಪತಿಯ ಮಗನಾದ ಶಿವ 9 ನೇ ತರಗತಿ ವಿದ್ಯಾರ್ಥಿಗಳಾಗಿದ್ದು, ಕಾಚಹಳ್ಳಿ ಗ್ರಾಮದ ಶಿವ ಕೋವಿಡ್ ಕಾರಣದಿಂದ ಶಾಲೆ ತೆರೆಯದ ಕಾರಣ ದಿಬ್ಬೂರಹಳ್ಳಿಯ ಸಂಬಂಧಿಕರಾದ ಮೂರ್ತಿ ಮನೆಗೆ ಬಂದಿದ್ದ ಎನ್ನಲಾಗಿದೆ.
ಕುರಿ ಮೇಯಿಸಲೆಂದು ದರ್ಶನ್ ಜೊತೆ ಶಿವ ತೆರಳಿದ್ದಾನೆ, ಕುರಿ ಮೇಯಿಸುತ್ತಾ ಬಚ್ಚನಹಳ್ಳಿಯ ಬಳಿಯ ಆಶ್ರಯ ವಸತಿ ಶಾಲೆಯ ಹಿಂಭಾಗದಲ್ಲಿರುವ ಯರ್ರಕುಂಟೆಯಲ್ಲಿ ಹತ್ತಿರ ಕುರಿಗಳನ್ನು ಮೇಯಲು ಬಿಟ್ಟು ಕುಂಟೆಯ ನೀರಿನಲ್ಲಿ ಈಜಲು ಹೋಗಿ ಈಜು ಬಾರದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಸ್ಥಳದಲ್ಲಿ ಮೃತರ ಸಂಬಂಧಿಕರ ಗೋಳು ಮುಗಿಲು ಮುಟ್ಟಿದ್ದು, ಸ್ಥಳಕ್ಕೆ ದಿಬ್ಬೂರಹಳ್ಳಿ ಪೊಲೀಸರು ಬೇಟಿ ನೀಡಿ ಮೃತ ಬಾಲಕರ ಶವಗಳನ್ನು ನೀರಿನಿಂದ ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಪ್ರಕರಣ ದಾಖಲಿಸಿ ಕೊಂಡು ತನಿಖೆ ನಡೆಸಿದ್ದಾರೆ.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ

